ವಾಷಿಂಗ್ಟನ್, ಜೂನ್ 5 : ಪೊಲೀಸ್ ಅಧಿಕಾರಿಯ ಹಿಂಸೆಯಿಂದ ಮೃತಪಟ್ಟಿದ್ದ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ (46) ಎಂಬುವವರಿಗೆ ಗೌರವ ಸೂಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ನಲ್ಲಿ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಆದರೆ ಟ್ರಂಪ್ ಪೋಸ್ಟ್ ಮಾಡಿದ ವಿಡಿಯೊವನ್ನು ಟ್ವಿಟರ್ ಡಿಲೀಟ್ ಮಾಡಿದೆ.
3 ನಿಮಿಷ 45 ಸೆಕೆಂಡ್ ಅವಧಿಯ ವಿಡಿಯೊವನ್ನು ಜೂನ್ 3ರಂದು ಟ್ರಂಪ್, ಫ್ಲಾಯ್ಡ್ ಗೌರವಾರ್ಥ ಹಂಚಿಕೊಂಡಿದ್ದರು. ಆದರೆ ಕಾಪಿರೈಟ್ ಸಮಸ್ಯೆಯಿಂದಾಗಿ ಆ ವಿಡಿಯೋವನ್ನು ಟ್ವಿಟರ್ ಡಿಲೀಟ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಕಪ್ಪು ವರ್ಣೀಯ ಫ್ಲಾಯ್ಡ್ ಅವರನ್ನು ಮಿನಿಯಾಪೊಲೀಸ್ ನಗರದ ಶ್ವೇತವರ್ಣೀಯ ಪೊಲೀಸ್ ಅಧಿಕಾರಿಯೊಬ್ಬರು ಬಂಧಿಸಿ, ಅವರ ಕುತ್ತಿಗೆ ಮೇಲೆ ಮೊಣಕಾಲನ್ನು ಒತ್ತಿ ಹಿಂಸಿಸಿದರು. ಇದರಿಂದಾಗಿ ಫ್ಲಾಯ್ಡ್ ಉಸಿರುಗಟ್ಟಿ ಮೃತಪಟ್ಟಿದ್ದರು. ಈ ಘಟನೆಯನ್ನು ಜನಾಂಗೀಯ ದೌರ್ಜನ್ಯ ಎಂದು ಬಣ್ಣಿಸಿ ಅಮೆರಿಕದಲ್ಲಿ ಪ್ರತಿಭಟನೆ ನಡೆದಿತ್ತು.








