ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಕೊರೊನಾ ಸಂಕಷ್ಟವನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಬರಾಕ್ ಒಬಾಮಾ ತಮ್ಮ ಆಡಳಿತ ಅವಧಿಯಲ್ಲಿ ಸಹವರ್ತಿಗಳಾಗಿದ್ದವರೊಂದಿಗೆ ಕಾನ್ಫರೆನ್ಸ್ ಕಾಲ್‌ನಲ್ಲಿ ಆಡಿದ್ದ ಅವರ ಮಾತುಗಳು ಸೋರಿಕೆಯಾಗಿದ್ದು, ಇದೀಗ ಅಮೆರಿಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ‘ಕೊರೊನಾ ವೈರಸ್ ಪಿಡುಗನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ವಿಶ್ವದ ಅತ್ಯುತ್ತಮ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರಗಳೂ ಸಹ ಪಿಡುಗು ನಿರ್ವಹಿಸಲು ಪರದಾಡುತ್ತಿವೆ. ಆದರೆ ನಮ್ಮಲ್ಲಿಯಂತೂ ವಿಪರೀತಕ್ಕಿಟ್ಟುಕೊಂಡಿದೆ. ಇದರಲ್ಲಿ ನನಗೇನು ಸಿಗುತ್ತೆ? ಬೇರೆಯವರಿಗೆ ಏನಾದರೆ ನನಗೇನು? ಎಂಬ ಮನಃಸ್ಥಿತಿ ಇರುವ ಆಡಳಿತಗಾರರು ಸರ್ಕಾರದ ಚುಕ್ಕಾಣಿ ಹಿಡಿದರೆ ಇನ್ನೇನಾಗುತ್ತೆ ಎಂದು ಕಿಡಿಕಾರಿದ್ದಾರೆ ಒಬಾಮ.
ಅಂತೆಯೇ ಇದಕ್ಕಾಗಿಯೇ ಜೋ ಬಿಡೆನ್ ಪರ ಪ್ರಚಾರ ಕಾರ್ಯದಲ್ಲಿ ನನಗೆಷ್ಟು ಸಾಧ್ಯವೋ ಅಷ್ಟೂ ಹೊತ್ತು ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿರುವ ಒಬಾಮಾ, ಈ ಬಾರಿ ನಡೆಯುವ ಅಧ್ಯಕ್ಷೀಯ ಚುನಾವಣೆಯು ಅತಿಮುಖ್ಯ. ಏಕೆಂದರೆ ನಾವು ಒಬ್ಬ ವ್ಯಕ್ತಿಯನ್ನೋ ಅಥವಾ ಒಂದು ಪಕ್ಷವನ್ನೋ ಎದುರಿಸುತ್ತಿಲ್ಲ. ಹಲವು ವರ್ಷಗಳಿಂದ ನೆಲೆಯೂರಿರುವ ಸ್ವಾರ್ಥಪರ, ವಿವೇಚನೆಯಿಲ್ಲದ ಆಡಳಿತ, ಒಡೆದು ಆಳುವ ನೀತಿ, ಇನ್ನೊಬ್ಬರನ್ನು ಶತ್ರುಗಳು ಎಂದು ಪರಿಗಣಿಸುವ ಧೋರಣೆಯ ವಿರುದ್ಧ ನಾವು ಹೋರಾಡಬೇಕಿದೆ ಎಂದು ಹೇಳಿದ್ದಾರೆ.








