ಅಹಮದಾಬಾದ್ ನ ಮೊಟೆರಾ ಅಂಗಳದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳುತ್ತಾ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತದ ಜೊತೆಗಿನ ಅಮೆರಿಕಾ ಸಂಬಂಧ ಅತ್ಯುತ್ತಮವಾಗಿದೆ. ದೇಶದ ರಕ್ಷಣಾ ಸಾಮರ್ಥ್ಯ, ತಾಂತ್ರಿಕತೆ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಉತ್ತಮ ದೇಶವೆಂಬುದಾಗಿ ಭಾರತ ಹೆಸರುಗಳಿಸಿದೆ. ಇಂತಹ ದೇಶಕ್ಕೆ ಭೇಟಿ ನೀಡಿದ್ದು ಖುಷಿ ತಂದಿದೆ. ಅಮೇರಿಕಾ ಎಂದಿಗೂ ಭಯೋತ್ಪಾದನೆಗೆ ಕುಮ್ಮಕ್ಕು, ಪ್ರೋತ್ಸಾಹ ನೀಡುವುದಿಲ್ಲ. ಭಯೋತ್ಪಾದನೆ ವಿಚಾರದಲ್ಲಿ ರಾಜಿಯೇ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಮೊಟೆರಾದಲ್ಲಿ ಭಾಷಣ ಆರಂಭಿಸಿದ ಟ್ರಂಪ್, ನಾನು ಹಾಗೂ ಮೆಲಾನಿಯಾ 8 ಸಾವಿರ ಮೈಲಿ ದೂರ ಪ್ರಯಾಣಿಸಿ ಒಂದು ಸಂದೇಶ ಹೇಳಲು ಇಲ್ಲಿಗೆ ಬಂದಿದ್ದೇವೆ.. ‘ಅಮೆರಿಕ ಭಾರತವನ್ನ ಪ್ರೀತಿಸುತ್ತದೆ, ಅಮೆರಿಕ ಭಾರತವನ್ನ ಗೌರವಿಸುತ್ತದೆ. ಅಮೆರಿಕ ಎಂದಿಗೂ ಭಾರತಕ್ಕೆ ಹಾಗೂ ಭಾರತದ ಜನರಿಗೆ ನಿಷ್ಠೆಯ ಹಾಗೂ ಪ್ರಮಾಣಿಕ ಸ್ನೇಹಿತನಾಗಿರುತ್ತದೆ ‘ ನಿಮ್ಮ ಆತಿಥ್ಯವನ್ನ ನಾವು ಎಂದಿಗೂ ಮರೆಯುವುದಿಲ್ಲ. ಇವತ್ತಿನಿಂದ ನಮ್ಮ ಹೃದಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನ ಇರಲಿದೆ. ಮೊಟೇರಾದಲ್ಲಿ ನೀವು ನೀಡಿದ ಗೌರವ ಅಮೆರಿಕನ್ನರಿಗೆ ನೀಡಿದ ಗೌರವ ಎಂದ್ರು.

“ನಿಮ್ಮ ಒಗ್ಗಟ್ಟು ಎಲ್ಲರಿಗೂ ಉದಾಹರಣೆ”
ವಿಶ್ವದಾದ್ಯಂತ ಜನರು ಇಲ್ಲಿನ ಸಿನಿಮಾಗಳನ್ನ ನೋಡಲು ಇಷ್ಟಪಡುತ್ತಾರೆ. ನೀವು ಸಚಿನ್, ವಿರಾಟ್ ಕೊಹ್ಲಿಯಂಥ ಅದ್ಭುತ ಕ್ರಿಕೆಟಿಗರಿಗೆ ಚೀರ್ ಮಾಡ್ತೀರ. ಹಿಂದೂ, ಮುಸ್ಲಿಮ್, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧರು ಸೇರಿದಂತೆ ವಿವಿಧ ಧರ್ಮದ ಜನರು ಒಂದಾಗಿ ಬಾಳುತ್ತಿರುವ ದೇಶ ಭಾರತ. ನಿಮ್ಮ ಒಗ್ಗಟ್ಟು ಎಲ್ಲರಿಗೂ ಉದಾಹರಣೆ ಎಂದ ಟ್ರಂಪ್, ಮಹಾತ್ಮ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಸಂತೋಷವಾಯ್ತು. ಇಂದು ಎರಡು ದೇಶಗಳ ನಡುವಿನ ಸ್ನೇಹವನ್ನ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾನು ಹಾಗೂ ಮೋದಿ ಮಾತುಕತೆ ನಡೆಸಲಿದ್ದೇವೆ ಎಂದು ತಿಳಿಸಿದರು.
“ಮೋದಿ ತುಂಬಾ ಕಠಿಣ ವ್ಯಕ್ತಿ”
ಭಾಷಣದ ವೇಳೆ ಪ್ರಧಾನಿ ಮೋದಿ ಅವರನ್ನು ಕೊಂಡಾಡಿದ ಟ್ರಂಪ್, ‘ಪ್ರಧಾನಿ ಮೋದಿ ಅದ್ಭುತ ಉನ್ನತಿಯ ನಡೆದಾಡುವ ಕಥೆ’ ಎಂದ್ರು. ಬಾಲ್ಯದಲ್ಲಿ ಮೋದಿ ಇದೇ ಗುಜರಾತ್ ನಲ್ಲಿ ಚಹಾ ಮಾರುತ್ತಿದ್ದರು ಎಂದು ಕೇಳಿದ್ದೇನೆ. ಎಲ್ಲರೂ ಮೋದಿಯನ್ನ ಪ್ರೀತಿಸುತ್ತಾರೆ. ಆದ್ರೆ ನಾನೊಂದು ಮಾತು ಹೇಳ್ತೀನಿ, ಮೋದಿ ತುಂಬಾ ಕಠಿಣ ವ್ಯಕ್ತಿ. ಮೋದಿ.. ಮೋದಿ ಭಾರತದ 27 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದಾರೆ. ಅವರ ಆಡಳಿತದಲ್ಲಿ ಭಾರತದ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಸಿಕ್ಕಿದೆ. ಮೋದಿ ನನ್ನ ಸ್ನೇಹಿತ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದು ಮೋದಿ ಸಾಧನೆಗಳನ್ನು ವಿಶ್ವದ ದೊಡ್ಡಣ್ಣ ಹೊಗಳಿದರು.
“ಭಯೋತ್ಪಾದನೆ ವಿರುದ್ಧ ಸಮರ”
ಟ್ರಂಪ್ ತಮ್ಮ ಭಾಷಣದ ವೇಳೆ ಭಯೋತ್ಪಾದನೆ ಬಗ್ಗೆ ಮಾತನಾಡುತ್ತಾ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ರು. ಭಯೋತ್ಪಾದನೆಯಿಂದ ದೇಶದ ಪ್ರಜೆಗಳನ್ನ ಕಾಪಾಡಲು ನಮ್ಮ ಎರಡೂ ದೇಶಗಳು ಒಂದಾಗಿ ಹೋರಾಡುತ್ತಿವೆ. ನನ್ನ ಆಡಳಿತದಲ್ಲಿ ಐಸಿಸ್ ನ ರಕ್ತಪಿಪಾಸುಗಳ ವಿರುದ್ಧ ಅಮೆರಿಕಾ ಸೇನೆಯ ಸಂಪೂರ್ಣ ಶಕ್ತಿಯನ್ನ ಬಳಸಿಕೊಳ್ಳುವ ಅವಕಾಶ ನೀಡಲಾಯ್ತು. ಅದರ ಪರಿಣಾಮ ಇವತ್ತು ಐಸಿಸ್ ಮುಖ್ಯಸ್ಥ ನಿರ್ನಾಮವಾಗಿದ್ದಾನೆ, ರಾಕ್ಷಸ ಅಲ್ ಬಾಗ್ದಾದಿ ಸತ್ತಿದ್ದಾನೆ. ಇಡೀ ವಿಶ್ವದಲ್ಲೇ ಅತ್ಯುತ್ತಮವಾದ, ಶಕ್ತಿಶಾಲಿ ಸೇನಾ ಸಲಕರಣೆಗಳನ್ನ ಭಾರತಕ್ಕೆ ನೀಡಲು ಅಮೆರಿಕಾ ಎದುರು ನೋಡುತ್ತಿದೆ. ನಾವು ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನ ತಯಾರಿಸುತ್ತೇವೆ. ಭಾರತೀಯ ಸೇನೆಗೆ ಅತ್ಯದ್ಭುತ ಮಿಲಿಟರಿ ಹೆಲಿಕಾಪ್ಟರ್ ಹಾಗೂ ಇತರೆ ಸಲಕರಣೆಗಳ ಪೂರೈಕೆಗೆ ನಮ್ಮೆರಡು ದೇಶದ ರಾಯಭಾರಿಗಳು ನಾಳೆ 3 ಬಿಲಿಯನ್ ಡಾಲರ್ ನ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದ್ರು.
ಕೊನೆಯದಾಗಿ ಚಂದ್ರಯಾನದ ಬಗ್ಗೆ ಮಾತನಾಡಿದ ಟ್ರಂಪ್, ಚಂದ್ರಯಾನ ಯೋಜನೆ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ನೀವು ಎಲ್ಲೆಯನ್ನ ಮೀರಿ ಕೆಲಸ ಮಾಡ್ತಿದ್ದೀರಿ. ಪ್ರಧಾನಿ ಮೋದಿ ನಿಮ್ಮ ಆತಿಥ್ಯಕ್ಕೆ ಧನ್ಯವಾದ. ಭಾರತೀಯರೇ ನಿಮ್ಮ ಅದ್ಭುತ ಸ್ವಾಗತಕ್ಕೆ ಧನ್ಯವಾದ. ದೇವರು ಭಾರತಕ್ಕೆ, ಅಮೆರಿಕಗೆ ಒಳ್ಳೆಯದು ಮಾಡಲಿ ಎಂದು ತಮ್ಮ ಸುದೀರ್ಘ ಭಾಷಣವನ್ನು ಮುಗಿಸಿ ಆಗ್ರಾದತ್ತ ತೆರಳಿದರು.








