ಬೆಂಗಳೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುಂದೆ, ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಡಿ.ಕೆ.ಎಸ್. ಹೆಗ್ಡೆ ಅವರೇ ಸರ್ಕಾರಿ ಶಾಲೆಗಳ ಕರಾಳ ಮುಖವನ್ನು ಅನಾವರಣಗೊಳಿಸಿದ ಅಪರೂಪದ ಪ್ರಸಂಗಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಬುಧವಾರ ಸಾಕ್ಷಿಯಾಯಿತು. ತಂದೆಯೇ ಮುಖ್ಯಮಂತ್ರಿಯಾಗಿ ವೇದಿಕೆಯಲ್ಲಿದ್ದರೂ ಯಾವುದೇ ಮುಲಾಜಿಲ್ಲದೆ ಸರ್ಕಾರಿ ಶಾಲೆಗಳಲ್ಲಿನ ಅನೈರ್ಮಲ್ಯ, ಸಾರಿಗೆ ಕೊರತೆ ಹಾಗೂ ಶಿಕ್ಷಕರ ಬೇಜವಾಬ್ದಾರಿತನದ ವಿರುದ್ಧ ಚಾಟಿ ಬೀಸುವ ಮೂಲಕ ಅವರು ಸರ್ಕಾರಕ್ಕೆ ವಾಸ್ತವದ ಕನ್ನಡಿ ಹಿಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆಯೋಜಿಸಿದ್ದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರತಿನಿಧಿಗಳ ಮಹತ್ವದ ಸಭೆಯಲ್ಲಿ ನ್ಯಾಷನಲ್ ಎಜುಕೇಷನ್ ಫೌಂಡೇಷನ್ ಟ್ರಸ್ಟಿ ಕಾರ್ಯದರ್ಶಿಯಾಗಿ ಭಾಗವಹಿಸಿದ್ದ ಐಶ್ವರ್ಯಾ ಅವರು, ತಾವು ದತ್ತು ಪಡೆದ ಶಾಲೆಯ ಅನುಭವಗಳನ್ನು ಮುಂದಿಟ್ಟುಕೊಂಡು ವ್ಯವಸ್ಥೆಯ ಲೋಪಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಮೂಲಸೌಕರ್ಯಕ್ಕಿಂತ ಜವಾಬ್ದಾರಿ ಮುಖ್ಯ: ಸ್ವಚ್ಛತೆಯೇ ಇಲ್ಲದ ಶಾಲೆಗಳು
ನಾವು ದೊಡ್ಡಲಹಳ್ಳಿಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡ ಸಂದರ್ಭದಲ್ಲಿ ಅಲ್ಲಿ 400 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಮೇಲ್ನೋಟಕ್ಕೆ ಆ ಶಾಲೆಯಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯಗಳಿದ್ದವು. ಆದರೆ ಕೇವಲ ಕಟ್ಟಡ ಮತ್ತು ಮೂಲಸೌಕರ್ಯಗಳಿಂದ ಮಾತ್ರ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ ಎಂದು ಭಾವಿಸುವುದು ತಪ್ಪು. ನಾನೇ ಖುದ್ದಾಗಿ ಶಾಲೆಗೆ ಭೇಟಿ ನೀಡಿದಾಗ, ಅಲ್ಲಿನ ಅವ್ಯವಸ್ಥೆಯಿಂದ ಮಕ್ಕಳು ಹಾಳಾದರು ಎಂದು ಜನರು ಮಾತನಾಡಿಕೊಳ್ಳುವುದನ್ನು ಕಿವಿಯಾರೆ ಕೇಳಿದ್ದೇನೆ. ಆದ್ದರಿಂದ ಸೌಕರ್ಯಗಳಿಗಿಂತ ಅದನ್ನು ನಿರ್ವಹಿಸುವ ಜವಾಬ್ದಾರಿ ಅತಿ ಮುಖ್ಯ ಎಂದು ಅವರು ಪ್ರತಿಪಾದಿಸಿದರು.
ಸರ್ಕಾರಿ ಶಾಲೆಗಳಲ್ಲಿ ನೈರ್ಮಲ್ಯದ ಕೊರತೆಯು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಅವುಗಳನ್ನು ಸ್ವಚ್ಛಗೊಳಿಸಲು ಸಿಬ್ಬಂದಿಯೇ ಇಲ್ಲ. ನಮ್ಮ ಮನೆಯನ್ನು ನಾವು ದಿನನಿತ್ಯ ಸ್ವಚ್ಛಗೊಳಿಸದಿದ್ದರೆ ಅದು ಹೇಗೆ ಹಾಳಾಗುತ್ತದೆಯೋ, ಶಾಲೆಗಳ ಸ್ಥಿತಿಯೂ ಹಾಗೆಯೇ ಆಗಿದೆ. ಇನ್ನು ಪ್ರೌಢಶಾಲೆಯ ಹೆಣ್ಣುಮಕ್ಕಳು ಬಳಸುವ ಸ್ಯಾನಿಟರಿ ಪ್ಯಾಡ್ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಯಾವುದೇ ವ್ಯವಸ್ಥೆಯಿಲ್ಲ, ಮಕ್ಕಳಿಗೆ ಕುಡಿಯಲು ಶುದ್ಧ ನೀರಿಲ್ಲ. ಇವೆಲ್ಲವೂ ಸರ್ಕಾರವೇ ನಿರ್ವಹಿಸಬೇಕಾದ ಕನಿಷ್ಠ ಜವಾಬ್ದಾರಿಗಳಲ್ಲವೇ ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ಕಿವಿ ಹಿಂಡಿದರು.
ಕೋಟ್ಯಂತರ ಮೌಲ್ಯದ ಕಂಪ್ಯೂಟರ್ಗಳಿಗೆ ಹಿಡಿದಿದೆ ತುಕ್ಕು
ಶಾಲೆಗಳಿಗೆ ತಂತ್ರಜ್ಞಾನ ಒದಗಿಸುವ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ವಿಪರ್ಯಾಸವನ್ನು ಉಲ್ಲೇಖಿಸಿದ ಅವರು, ನಾವು ಶಾಲೆಯನ್ನು ದತ್ತು ಪಡೆದಾಗ ಅಲ್ಲಿ ವಿವಿಧ ಸಂಘ ಸಂಸ್ಥೆಗಳು ದಾನವಾಗಿ ನೀಡಿದ್ದ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ರೊಬೊಟಿಕ್ಸ್ ಹಾಗೂ ಐಒಟಿ ಪ್ರಯೋಗಾಲಯಗಳಿದ್ದವು. ಆದರೆ ವಿಪರ್ಯಾಸವೆಂದರೆ, ಮಕ್ಕಳಿಗೆ ಅದನ್ನು ಹೇಳಿಕೊಡಲು ಅಲ್ಲಿ ಶಿಕ್ಷಕರೇ ಇರಲಿಲ್ಲ. ಪರಿಣಾಮವಾಗಿ ಆ ಎಲ್ಲಾ ಕಂಪ್ಯೂಟರ್ಗಳು ಬಳಕೆಯಾಗದೆ ತುಕ್ಕು ಹಿಡಿದು ಹೋಗಿದ್ದವು. ಸರ್ಕಾರದಲ್ಲಿ ಕುಳಿತವರು ನಾವು ಇಷ್ಟು ಕಂಪ್ಯೂಟರ್ ಕೊಟ್ಟಿದ್ದೇವೆ ಎಂದು ಲೆಕ್ಕ ಹೇಳಿದರೆ ಸಾಲದು, ಅವು ನಿಜವಾಗಿಯೂ ಬಳಕೆಯಾಗುತ್ತಿವೆಯೇ ಎಂಬ ಬಗ್ಗೆ ಆಡಿಟ್ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಲಕ್ಷ ಸಂಬಳ ಪಡೆಯುವವರ ಅಸಡ್ಡೆ, ಅತಿಥಿ ಶಿಕ್ಷಕರ ಸಂಕಷ್ಟ
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಯ ಕೊರತೆಗಿಂತ ಹೆಚ್ಚಾಗಿ ಇರುವ ಶಿಕ್ಷಕರಲ್ಲಿ ದಕ್ಷತೆ ಹಾಗೂ ಸಂವಹನದ ಕೊರತೆಯೇ ದೊಡ್ಡ ಮಟ್ಟದಲ್ಲಿದೆ ಎಂದು ಐಶ್ವರ್ಯಾ ಕಳವಳ ವ್ಯಕ್ತಪಡಿಸಿದರು. ನಾವು ದತ್ತು ಪಡೆದ ಶಾಲೆಯಲ್ಲೇ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಕಾಯಂ ಶಿಕ್ಷಕರಿದ್ದಾರೆ. ಆದರೆ ಅವರು ವಾರದಲ್ಲಿ ಐದು ದಿನವೂ ಸರಿಯಾಗಿ ಶಾಲೆಗೆ ಬರುತ್ತಿರಲಿಲ್ಲ. ದುರದೃಷ್ಟವಶಾತ್, ಶಾಲೆಯನ್ನು ದತ್ತು ಪಡೆದ ನಮಗೆ ಅವರ ವಿರುದ್ಧ ವರದಿ ಮಾಡುವ ಅಥವಾ ನಾವು ನೀಡಿದ ಸಂಪನ್ಮೂಲಗಳ ಮೇಲ್ವಿಚಾರಣೆ ನಡೆಸುವ ಯಾವುದೇ ಅಧಿಕಾರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೊಂದೆಡೆ, ಸರ್ಕಾರವು ಅತಿಥಿ ಶಿಕ್ಷಕರಿಗೆ ಕೇವಲ 11 ಸಾವಿರ ರೂಪಾಯಿ ಗೌರವಧನ ನೀಡುತ್ತಿದೆ. ಇಷ್ಟು ಕಡಿಮೆ ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟವಾಗಿರುವಾಗ ಅವರಿಂದ ಹೆಚ್ಚಿನ ದಕ್ಷತೆಯನ್ನು ನಿರೀಕ್ಷಿಸುವುದು ಹೇಗೆ? ಈ ವಾಸ್ತವವನ್ನು ಅರಿತು ನಮ್ಮ ಸಂಸ್ಥೆಯಿಂದಲೇ ಅತಿಥಿ ಶಿಕ್ಷಕರಿಗೆ ಹಾಗೂ ಇತರ ಸಿಬ್ಬಂದಿಗೆ ಹೆಚ್ಚುವರಿ ವೇತನ ನೀಡಲು ಆರಂಭಿಸಿದೆವು. ಇದರಿಂದ ಅವರಲ್ಲಿ ಉತ್ಸಾಹ ಮತ್ತು ದಕ್ಷತೆ ಹೆಚ್ಚಾಯಿತು. ಸಿಬ್ಬಂದಿಗೆ ಸೂಕ್ತ ವೇತನ ಮತ್ತು ಪ್ರೇರಣೆ ಸಿಕ್ಕಾಗ ಮಾತ್ರ ಅವರು ಶಾಲೆಯನ್ನು ದೇವಾಲಯದಂತೆ ಕಾಣಲು ಪ್ರಾರಂಭಿಸುತ್ತಾರೆ ಎಂದು ಅವರು ಕಿವಿಮಾತು ಹೇಳಿದರು.
ಸರ್ಕಾರಿ ಶಾಲೆಗಳ ಸಮಗ್ರ ಸುಧಾರಣೆಗಾಗಿ ಐಶ್ವರ್ಯಾ ಅವರು ಸರ್ಕಾರದ ಮುಂದೆ ಹಲವು ಮಹತ್ವದ ಸಲಹೆಗಳನ್ನು ಇಟ್ಟರು. ಶಾಲೆಗಳಲ್ಲಿ ಕೇವಲ ಪಾಠ ಮತ್ತು ಬಿಸಿಯೂಟಕ್ಕೆ ಸೀಮಿತವಾಗದೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು. ಒಬ್ಬ ಶಿಕ್ಷಕರು ಕನಿಷ್ಠ ಮೂರು ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವ ನಿಯಮ ತರಬೇಕು. ಶಾಲೆಗಳ ಕಾರ್ಯನಿರ್ವಹಣೆಯ ಸಮಯದಲ್ಲಿ ನಮ್ಯತೆ ಇರಬೇಕು ಹಾಗೂ ಗ್ರಾಮೀಣ ಭಾಗದ ಮಕ್ಕಳ ಅನುಕೂಲಕ್ಕಾಗಿ ಶಾಲೆಗಳಿಗೆ ಸಾರಿಗೆ ಸೌಕರ್ಯ ಕಲ್ಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರಲ್ಲಿನ ಸಂವಹನ ಸಮಸ್ಯೆಯನ್ನು ನಿವಾರಿಸಿ, ಪ್ರತಿಯೊಬ್ಬರಿಗೂ ಉತ್ತರದಾಯಿತ್ವವನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.







