ತುಳು ಹಾಗೂ ಕನ್ನಡ ಚಿತ್ರರಂಗದ ಉದಯೋನ್ಮುಖ ನಿರ್ದೇಶಕ ರಘು ಶೆಟ್ಟಿ ಇನ್ನಿಲ್ಲ…!
ಅರ್ಜುನ್ ವೆಡ್ಸ್ ಅಮೃತಾ ಖ್ಯಾತಿಯ ನಿರ್ದೇಶಕ , ಕನ್ನಡ ಹಾಗೂ ತುಳು ಸಿನಿಮಾರಂಗದಲ್ಲಿ ಖ್ಯಾತಿ ಪಡೆದಿರುವ ರಘು ಶೆಟ್ಟಿ ಇಹಲೋಕ ತ್ಯಜಿಸಿದ್ದಾರೆ. 39 ವರ್ಷದಲ್ಲೇ ಅತಿ ಚಿಕ್ಕ ವಯಸ್ಸಿನಲ್ಲೇ ಬದುಕಿನ ಪಯಣಕ್ಕೆ ವಿದಾಯ ಹೇಳಿದ್ದಾರೆ. ರಘು ಶೆಟ್ಟಿ ಅವರು ಹೃದಯಾಘಾತದಿಮದ ನಿಧನರಾಗಿದ್ದಾರೆ. ಹೃದಯಾಘಾತದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಘು ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಮೂಡಬಿದ್ರೆಯವರಾಗಿರುವ ರಘು ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಪೂರೈಸಿದ ಬಳಿಕ, ಮೂಡಬಿದ್ರೆಯ ಮಹಾವೀರ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಬಳಿಕ ಸಿನಿಮಾರಂಗದ ಆಸಕ್ತಿಯಿಂದ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲದಿಂದ ಹೊರಟ ರಘು ಅವರು ಮೊದಲಿಗೆ ತುಳು ಸಿನಿಮಾ ನಿರ್ದೇಶನ ಮಾಡಿದ್ದರು. ಅವರ ನಿರ್ದೇಶನದಲ್ಲಿ ಮೊದಲು ಮೂಡಿಬಂದಿದ್ದ ಸಿನಿಮಾ ‘ ಅರ್ಜುನ್ ವೆಡ್ಸ್ ಅಮೃತಾ’. ಈ ಸಿನಿಮಾ ನಿರ್ದೇಶನಕ್ಕಾಗಿ ರಘು ಶೆಟ್ಟಿ ಅವರಿಗೆ ಅತ್ಯುತ್ತಮ ಪ್ರಶಸ್ತಿಯೂ ಸಿಕ್ಕಿತ್ತು.
ಇತ್ತ ಕನ್ನಡಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದ ರಘು ಅವರು ಪ್ರಸ್ತುತ ಕೋಮಲ್ ಅಭಿನಯದ ಕನ್ನಡ ಸಿನಿಮಾದ ತಯಾರಿಯಲ್ಲಿದ್ದರು. ಆದ್ರೆ ಅಷ್ಟರಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇನ್ನೂ ರಘು ಶೆಟ್ಟಿ ಅವರ ನಿಧನಕ್ಕೆ ಕನ್ನಡ ಸಿನಿಮಾರಂಗ ಹಾಗೂ ತುಳು ಸಿನಿಮಾರಂಗದ ಕಲಾವಿಧರು ಸಂತಾಪ ಸೂಚಿಸಿದ್ದಾರೆ.








