ಹಸಿರ ಸೊಬಗಿನ, ನೀಲ ಕಡಲಿನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ತುಳುನಾಡಿನಲ್ಲಿ ಹಬ್ಬಹರಿದಿನಗಳೆಂದರೆ ತನ್ನದೇ ಆದ ರೀತಿರಿವಾಜುಗಳೊಂದಿಗೆ ಆಚರಿಸಲ್ಪಡುವ ಬದುಕಿನ ಪದ್ಧತಿ. ತುಳುನಾಡಿನ ಜೀವನಾಡಿ ಕೃಷಿಯನ್ನು ಗೌರವಿಸಿ, ನಮ್ಮನ್ನು ರಕ್ಷಿಸುವ ದೈವ ದೇವರುಗಳಿಗೆ ಶರಣಾಗತರಾಗಿ, ಪ್ರಕೃತಿಯನ್ನು ಆರಾಧಿಸಿ, ಮನುಷ್ಯ ಸಂಬಂಧವನ್ನು ಕಾಪಾಡುವ ಆಚರಣೆ. ದೇಹಕ್ಕೆ ಪುಷ್ಟಿ ಕೊಡುವ ಆಹಾರದೊಂದಿಗೆ ಮನಸ್ಸಿಗೂ ಸಂತೋಷ ನೀಡುವ ಭಾವ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಚಂದ್ರನ ಚಲನೆಯನ್ನು ಆಧರಿಸಿ, ಚಂದ್ರಮಾನ ಯುಗಾದಿಯ ಆಚರಿಸುತ್ತಾರೆ. ಆದರೆ ತುಳುನಾಡಿನಲ್ಲಿ ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ತುಳು ಸಂಸ್ಕೃತಿಯ ಪ್ರಕಾರ ವರ್ಷದ ಆರಂಭ ಬಿಸುವಿನೊಂದಿಗೆ.
ಮನೆಯ ಯಜಮಾನ ದೇವರ ಮುಂದೆ ಬಿಳಿ ಬಟ್ಟೆಯನ್ನು ಹಾಸಿ, ಅದರ ಮೇಲೆ ಮನೆಯಲ್ಲಿ ಬೆಳೆದ ತರಕಾರಿ, ಹಿಂಗಾರ, ಹೂವು, ಹಣ್ಣು, ಅಕ್ಕಿ, ತೆಂಗಿನಕಾಯಿಗಳನ್ನೊಳಗೊಂಡಂತೆ ಎಲ್ಲಾ ಫಲ ವಸ್ತುಗಳನಿಟ್ಟು, ದೀಪವನ್ನು ಬೆಳಗಿಸಿ, ನಡುವಿನಲ್ಲಿ ಒಂದು ಕನ್ನಡಿ ಇಟ್ಟರೆ, ಬಿಸುಕಣಿ ರೆಡಿ.
ಕೆಲವರು ಬಿಸುದಿನವೇ ನಸುಕಿನ ಜಾವದಲ್ಲಿ ಬಿಸುಕಣಿ ಇಟ್ಟರೆ, ಇನ್ನೂ ಕೆಲವರು ಮೊದಲ ದಿನ ಮಲಗುವ ಮೊದಲು ಬಿಸುಕಣಿ ಇಡುತ್ತಾರೆ.
ಬಿಸುವಿನ ಬೆಳಗಿನ ಜಾವ ಬೇಗನೆ ಎದ್ದು, ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಮನೆಮಂದಿಯೆಲ್ಲಾ ಕಣಿಗೆ ಕೈ ಮುಗಿದು, ಪ್ರಾರ್ಥನೆ ಸಲ್ಲಿಸಿ, ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಈ ಹಬ್ಬದ ವಿಶೇಷತೆ.
ಮನೆಯಿಂದ ಹೊರಗೆ ಇರುವ ಎಲ್ಲಾ ಮನೆಯ ಸದಸ್ಯರು ಆ ದಿನ ಹಾಜರಿದ್ದು ಹಿರಿಯರ ಆಶೀರ್ವಾದ ಪಡೆಯುತ್ತಾರೆ.
ಬಿಸು ಹಬ್ಬದ ದಿನ ಗದ್ದೆ ಉತ್ತು, ಬೀಜ ಬಿತ್ತಿದರೆ ಒಳ್ಳೆಯದೆಂಬ ನಂಬಿಕೆ ತುಳುವರಲ್ಲಿದೆ. ಬಿಸು ಪರ್ಬಕ್ಕೆ ಮೂಡೆಯ ತಿಂಡಿ ಅಥವಾ ಉದ್ದಿನ ದೋಸೆ , ಮಧ್ಯಾಹ್ನಕ್ಕೆ ಮನೆಯ ತೋಟದಲ್ಲಿ ಬೆಳೆದ ತರಕಾರಿಗಳಿಂದ ತಯಾರಿಸಿದ ಸಿಹಿಯೂಟ. ಗೇರು ಮರದಿಂದ ಹಸಿಯಾಗಿರುವಾಗಲೇ ತೆಗೆದ ಗೇರುಬೀಜವನ್ನು ಸೀಳಿ, ಅದರ ಒಳಗಿರುವ ಮೃದುವಾದ ಎಳೆಗೋಡಂಬಿ ಹಾಕಿ ತಯಾರಿಸಿದ ರುಚಿಕರವಾದ ಪಾಯಸದ ಹಬ್ಬದೂಟ.
ಆದರೆ ಇತ್ತೀಚೆಗೆ ತುಳುನಾಡಿನಲ್ಲಿ ಕೃಷಿಯ ಜೊತೆ ಅದೆಷ್ಟೋ ಆಚರಣೆಗಳೂ ಆಧುನಿಕತೆಯ ಸುಳಿಗಾಳಿಗೆ ಸಿಲುಕಿ ಮರೆಯಾಗುತ್ತಿದೆ. ಬಿಸುಕಣಿ ಇಡುವ ಸಂಪ್ರದಾಯ ವಿರಳವಾಗುತ್ತಿದ್ದು, ಕಣಿ ನೋಡಲು ದೇವಸ್ಥಾನಕ್ಕೆ ಹೋಗಿ ಕೈಮುಗಿದು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಈ ಬಾರಿ ಕೊರೋನಾ ಸೋಂಕು ಜನಸಾಮಾನ್ಯರ ಬದುಕನ್ನು ಪಲ್ಲಟಿಸಿದೆ. ಎಲ್ಲೆಡೆಯೂ ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ಮನೆಯಿಂದ ಹೊರಗೆ ಬರದ ಪರಿಸ್ಥಿತಿ ಎದುರಾಗಿದೆ. ನಾವು ನಂಬಿದ ಆರಾಧ್ಯ ದೈವವನ್ನು ಮನೆಯಲ್ಲೇ ಆರಾಧಿಸಬೇಕಾದ ಸಂದರ್ಭ ಒದಗಿದೆ. ಹಿರಿಯರು ನಡೆಸಿಕೊಂಡು ಬಂದಿರುವ ಹಬ್ಬ ಹರಿದಿನಗಳ ಆಚರಣೆಗಳನ್ನು, ನಮ್ಮ ಸಂಸ್ಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಿ, ಜಗತ್ತನ್ನೇ ತನ್ನ ಬಿಗಿಮುಷ್ಟಿಯಲ್ಲಿ ಹಿಡಿದು ಕಾಡುತ್ತಿರುವ ಕೊರೋನಾ ಎಂಬ ಮಹಾ ಮಾರಿ ಇನ್ನಾದರೂ ಕೊನೆಯಾಗಲಿ..ಎಲ್ಲೆಲ್ಲೂ ನೆಮ್ಮದಿ ನೆಲೆಯಾಗಲಿ.. ಎಂದು ಪ್ರಾರ್ಥಿಸೋಣ








