ನವದೆಹಲಿ : ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಅವರ ಕುರಿತಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.
ಜೆ.ಪಿ ನಡ್ಡಾ ಟ್ವೀಟ್ ನಲ್ಲಿ.. ‘ಡಾ.ಮನಮೋಹನ್ ಸಿಂಗ್ ಅದೇ ಪಕ್ಷಕ್ಕೆ ಸೇರಿದವರು. ಅಸಹಾಯಕವಾಗಿ 43,000 ಕಿ.ಮೀ.ಗಿಂತಲೂ ಹೆಚ್ಚು ಭಾರತೀಯ ಭೂಪ್ರದೇಶವನ್ನು ಚೀನಿಯರಿಗೆ ಒಪ್ಪಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಚೀನಾಗೆ ಯಾವುದೇ ಪ್ರತಿರೋಧ ಒಡ್ಡದೆ ಅಸಹ್ಯವಾದ ಕಾರ್ಯತಂತ್ರ ಮತ್ತು ಪ್ರಾದೇಶಿಕ ಶರಣಾಗತಿಯನ್ನು ಕಂಡಿತು. ಸಮಯ ಮತ್ತೆ ನಮ್ಮ ಪಡೆಗಳನ್ನು ಕುಗ್ಗಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ಇಲ್ಲಿ ನಡ್ಡಾ ಟ್ವೀಟ್ ಮಾಡುವ ವೇಳೆ ನೇರವಾಗಿ ‘43,000 ಕಿ.ಮೀ’ ಭೂ ಭಾಗ ಎಂದು ಉಲ್ಲೇಖಿಸಿದ್ದಾರೆ. ಆದರೆ, ಅದು ಚದರ ಕಿ.ಮೀ ಆಗಬೇಕಾಗಿತ್ತು.
ನಡ್ಡಾ ಅವರ ಇದೇ ಟ್ವೀಟ್ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ‘ಭೂ ಮಂಡಲದ ಇಡೀ ಸುತ್ತಳತೆಯೇ 40,075 ಕಿ.ಮೀ ಆಗಿರುವಾಗ 43,000 ಕಿ.ಮೀ ಭೂ ಭಾಗವನ್ನು ಚೀನಾಕ್ಕೆ ಒಪ್ಪಿಸಲು ಹೇಗೆ ಸಾಧ್ಯ? ಭಾರತವು ಭೂ ಮಂಡಲಕ್ಕಿಂತಲೂ ದೊಡ್ಡದಾಗಿದೆಯೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಆದರೆ ಜೆಪಿ ನಡ್ಡಾ ಅವರ ಟ್ವೀಟ್ ಅನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ 43,000 ಚದರ ಕಿ.ಮೀ ಭೂಭಾಗವನ್ನು ಚೀನಾಗೆ ಒಪ್ಪಿಸಲಾಗಿದೆ. ವ್ಯಂಗ್ಯವಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಡ್ಡಾ ಪರ ಬ್ಯಾಟ್ ಬೀಸುತ್ತಿದ್ದಾರೆ.