ಹೊಸದಿಲ್ಲಿ, ಮೇ 19: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಚಾರವಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಅವರನ್ನು ಭಾರತದ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಶ್ಮೀರದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಸೋಲನ್ನು ಕಂಡಿರುವ ಪಾಕಿಸ್ತಾನದ ಏಳಿಗೆಗೆ ಏನಾದರೂ ಮಾಡಿ ಎಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದ ಗ್ರಾಮವೊಂದಕ್ಕೆ ತೆರಳಿದ್ದ ಆಫ್ರಿದಿ, ಇದೊಂದು ಸುಂದರವಾದ ಗ್ರಾಮ. ಇಲ್ಲಿಗೆ ಬರಬೇಕೆಂಬ ಬಹಳ ದಿನದ ಆಸೆ ಈಗ ಈಡೇರಿದೆ. ಆದರೆ ಮಹಾಮಾರಿ ಕೊರೊನಾ ಇಡೀ ಜಗತ್ತನ್ನು ಆವರಿಸಿಕೊಂಡಿದೆ.
ಕೊರೋನಾಕ್ಕಿಂತ ಭಯಾನಕ ರೋಗ ಇನ್ನೊಂದಿದೆ. ಅದು ಭಾರತದ ಪ್ರಧಾನಿ ಮೋದಿಯವರ ಮನಸ್ಥಿತಿ. ಇಲ್ಲಿಂದ ಎರಡು ಕಿಲೊಮೀಟರ್ ದೂರದಲ್ಲಿರುವ ಕಾಶ್ಮೀರದಲ್ಲಿ ನಮ್ಮ ಬಂಧು, ಬಾಂಧವರಿಗೆ ಮೋದಿ ಬಹಳ ತೊಂದರೆ ಕೊಡುತ್ತಿದ್ದಾರೆ. ಅವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದು, ಈ ಬಗ್ಗೆ ಇಲ್ಲಿಯೂ ಮತ್ತು ನಾಳೆ ದೇವರ ಮುಂದೆಯೂ ಅವರು ಉತ್ತರ ಕೊಡಲೇಬೇಕು ಎಂದು ಹೇಳಿದ್ದರು.
ಆಫ್ರಿದಿ ಹೇಳಿಕೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಸುರೇಶ್ ರೈನಾ ‘ ಗೋಶ್! ತಾನು ಪ್ರಸ್ತುತವಾಗಿರಲು ಒಬ್ಬ ವ್ಯಕ್ತಿ ಏನೆಲ್ಲಾ ಮಾಡಬೇಕು! ಅದರಲ್ಲೂ ಹೆಚ್ಚಾಗಿ ಭಿಕ್ಷೆಯ ಮೇಲೆ ಬದುಕುತ್ತಿರುವ ರಾಷ್ಟ್ರಕ್ಕೆ. ವಿಫಲತೆ ಕಂಡಿರುವ ನಿಮ್ಮ ರಾಷ್ಟ್ರಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಿ. ಕಾಶ್ಮೀರವನ್ನು ಬಿಟ್ಟು ಬಿಡಿ. ನಾನು ಹೆಮ್ಮೆಯ ಕಾಶ್ಮೀರಿ ಮತ್ತು ಅದು ಯಾವಾಗಲೂ ಭಾರತದ ಅಳಿಸಲಾಗದ ಭಾಗವಾಗಿರುತ್ತದೆ. ಜೈ ಹಿಂದ್!’ ಎಂದು ಟ್ವೀಟ್ ಮಾಡಿದ್ದಾರೆ.








