ಗಾಂಧಿನಗರ: ಮಧ್ಯಪ್ರದೇಶದಲ್ಲಿ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೆ ಗುಜರಾತಿನಲ್ಲಿ ಇನ್ನಿಬ್ಬರು ಶಾಸಕರು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಇವರು ಸಧ್ಯದಲ್ಲೇ ಬಿಜೆಪಿ ಸೇರುವ ಸಾಧ್ಯತೆಗಳಿವೆ. ಅಲ್ಪೇಶ್ ಠಾಕೂರ್ ಮತ್ತು ಧವಲ್ಸಿನ್ಹಾ ಜಲಾ ಎಂಬುವವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಅಡ್ಡಮತದಾನ ಮಾಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಅಲ್ಪೇಶ್ ಠಾಕೂರ್, ನನ್ನ ಮತದ ಮೇಲೆ ಸಾಕಷ್ಟು ಸಮಸ್ಯೆಯನ್ನು ಸೃಷ್ಟಿಸಲು ಕಾಂಗ್ರೆಸ್ ವೀಕ್ಷಕಗಾರ ಯತ್ನಿಸಿದರು. ಹೀಗಾಗಿ ನಾನು ಯಾರಿಗೆ ಮತ ಚಲಾಯಿಸಬೇಕು ಎಂದು ಅರ್ಥ ಮಾಡಿಕೊಂಡೆ ಎಂದಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಉತ್ತರ ಗುಜರಾತಿನ ರಾಧಾಂಪುರ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ.
ರಾಜೀನಾಮೆ ನೀಡಿದ ಧವಲ್ ಜಲಾ, ಠಾಕೂರ್ ಅವರ ಆಪ್ತರಾಗಿದ್ದು, ಇವರು ಕೂಡ ಅಡ್ಡ ಮತದಾನ ಮಾಡಿದ್ದು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ಶಾಸಕರಿಬ್ಬರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದು, ತಮ್ಮ ಕ್ಷೇತ್ರಗಳಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ಕಾಂಗ್ರೆಸ್ ಪಕ್ಷಕ್ಕೆ ಮೇಲಿಂದ ಮೇಲೆ ಶಾಕ್ ಗಳು ಎದುರಾಗುತ್ತಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದುನೋಡಬೇಕಾಗಿದೆ.









