ಹೊಸದಿಲ್ಲಿ, ಜೂನ್ 1: ಕೇಂದ್ರ ಸರ್ಕಾರ, ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮೀಷನ್ ಕಚೇರಿಯಲ್ಲಿನ ಇಬ್ಬರು ಅಧಿಕಾರಿಗಳಿಗೆ 24 ಗಂಟೆಯೊಳಗೆ ದೇಶ ತೊರೆಯಲು ಆದೇಶ ಹೊರಡಿಸಿದೆ. ಭಾರತದ ವಿರುದ್ಧ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಾಕ್ ರಾಯಭಾರಿಗಳನ್ನು ಗಡಿಪಾರು ಮಾಡಲಾಗಿದೆ.
ಪಾಕ್ ರಾಯಭಾರಿ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಭಾರತದ ಭದ್ರತಾ ನೆಲೆಗಳಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಭಾರತೀಯ ಪ್ರಜೆಯೊಬ್ಬನಿಂದ ಸಂಗ್ರಹಿಸುತ್ತಿರುವಾಗ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದು, ದಾಖಲೆ ಕೊಟ್ಟ ವ್ಯಕ್ತಿಗೆ ಭಾರತೀಯ ರೂಪಾಯಿಯಲ್ಲಿ ನಗದು ಮತ್ತು ಐಫೋನ್ ನೀಡುತ್ತಿದ್ದರು.
ಸಿಕ್ಕಿ ಬಿದ್ದ ಅಧಿಕಾರಿಗಳನ್ನು ಪೊಲೀಸರು ಪ್ರಶ್ನಿಸಿದಾಗ ತಾವು ಭಾರತೀಯ ಪ್ರಜೆಗಳು ಎಂದು ವಾದಿಸಿದ ಅವರು ನಕಲಿ ಆಧಾರ್ ಕಾರ್ಡ್ ನೀಡಿದರು ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ತಾವು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಪರ ಕಾರ್ಯನಿರ್ವಹಿಸುತ್ತಿರುವ ವಿಷಯವನ್ನು ಬಾಯಿಬಿಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದು ಅಬೀಬ್ ಹುಸೇನ್ ಹಾಗೂ ಮುಹಮ್ಮದ್ ತಾಹೀರ್ ಎಂಬ ಈ ಇಬ್ಬರು ಅಧಿಕಾರಿಗಳು ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿನ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಈ ನಡುವೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿ ಬೇಹುಗಾರಿಕೆ ನಡೆಸುತ್ತಿದ್ದರು ಎಂಬ ಭಾರತದ ಆರೋಪ ಆಧಾರರಹಿತ ಎಂದು ಹೇಳಿಕೆ ನೀಡಿದೆ.








