ಬೆಂಗಳೂರು: ಕೆಎಸ್ ಆರ್ ಟಿಸಿ ಹಾಗೂ ಆಂಧ್ರ ಸಾರಿಗೆ ಬಸ್ ಗಳ ಪೈಪೋಟಿಗೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಗೊಲ್ಲಹಳ್ಳಿ ಗೇಟ್ ಹತ್ತಿರ ಈ ಘಟನೆ ನಡೆದಿದೆ. 8 ವರ್ಷದ ಮೋನಿಕಾ ಹಾಗೂ ಸೋದರ ಮಾವ ಕೆಳಗಿನಜೋಗಹಳ್ಳಿ ನಿವಾಸಿ ವೆಂಕಟೇಶ್ ಸಾವನ್ನಪ್ಪಿದ ದುರ್ದೈವಿಗಳು.
ಗೌರಿಬಿದನೂರು-ಬೆಂಗಳೂರು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಿಂದೂಪುರದಿಂದ ಬೆಂಗಳೂರಿಗೆ ಬರುತ್ತಿತ್ತು. ಈ ವೇಳೆ ಎಪಿಎಸ್‌ಆರ್‌ಟಿಸಿ ಬಸ್ ಬಂದಿದೆ. ಈ ವೇಳೆ ಎರಡೂ ಬಸ್ ಗಳ ಮಧ್ಯೆ ಓವರ್ ಟೇಕ್ ಪೈಪೋಟಿ ನಡೆದಿದೆ. ಆಗ 8 ವರ್ಷದ ಬಾಲಕಿ, ಆಕೆಯ ಸೋದರ ಮಾವನ ಜೊತೆ ಬೈಕ್‌ನಲ್ಲಿ ಹೊರಟಿದ್ದರು. ಬಸ್‌ಗಳ ಮಧ್ಯೆ ಬೈಕ್ ಸವಾರ ಸಿಲುಕಿದ್ದು, ಎಪಿಎಸ್‌ಆರ್‌ಟಿಸಿ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನೆಲಕ್ಕುರುಳಿದೆ. ಬೈಕ್ ಮೇಲೆ ಕೆಎಸ್ ಆರ್ ಟಿಸಿ ಬಸ್ ಹರಿದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಬಾಲಕಿ ತಲೆಗೆ ಗಂಭೀರ ಗಾಯವಾಗಿತ್ತು.
ಕೂಡಲೇ ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತು. ಆದರೆ, ಮಾರ್ಗ ಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಎರಡು ಬಸ್‌ಗಳನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.








