ಟೈಪ್ 1 ಡಯಾಬಿಟಿಸ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಮಾರ್ಚ್ 1 ರಂದು ಬೆಂಗಳೂರು ನಗರದ ಅರಮನೆ ರಸ್ತೆಯ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ನ ಸಂಸ್ಥಾಪನ ಮುಖ್ಯಸ್ಥರಾದ ಕೆ.ಎಸ್ ನವೀನ್ ಅವರು ತಿಳಿಸಿದ್ದಾರೆ. ಬೆಂಗಳೂರಿನ ಭಾರತೀಯ ವಿಧ್ಯಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಿನೇ ದಿನೇ ಭಾರತವು ಡಯಾಬಿಟಿಸ್ ನ ರಾಜಧಾನಿಯಾಗಿ ಪರಿವರ್ತನೆ ಆಗುತ್ತಿದೆ. ಭಾರತ ವಿಶ್ವದಲ್ಲಿಯೇ ಡಯಾಬಿಟಿಸ್ ಕಾಯಿಲೆಯುಳ್ಳವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಕಾಯಿಲೆ, ಮಕ್ಕಳು ಮತ್ತು ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದು ಮಾಹಿತಿಯ ಪ್ರಕಾರ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಈ ಟೈಪ್ 1 ಡಯಾಬಿಟಿಸ್ ಕಾಣಿಸಿಕೊಂಡಿದೆ. ತಂದೆ ತಾಯಿಗೆ ಡಯಾಬಿಟಿಸ್ ಇಲ್ಲದಿದ್ದರೂ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇದರ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಸಾಮಾನ್ಯ ಬಡವರಿಗೆ ಈ ವೆಚ್ಚ ಭರಿಸಲು ಸಾಧ್ಯವಾಗುವುದಿಲ್ಲ. ಇವರಿಗೆ ಸರ್ಕಾರದಿಂದಲೂ ಸಹ ಯಾವುದೇ ನೆರವು ಸಿಗುತ್ತಿಲ್ಲ. ಹೀಗಾಗಿ ಟೈಪ್ 1 ಡಯಾಬಿಟಿಸ್ ಸಮಸ್ಯೆಗಳನ್ನು ಸರ್ಕಾರಗಳ ಗಮನಕ್ಕೆ ತರುವ ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ದೇಶದ ಮೂಲೆ ಮೂಲೆಯಲ್ಲಿರುವ ಸಣ್ಣ ಸಣ್ಣ ಡಯಾಬಿಟಿಸ್ ಫೌಂಡೇಶನ್ ಗಳನ್ನು ಒಟ್ಟುಗೂಡಿಸಿ ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾ ಸ್ಥಾಪನೆ ಮಾಡಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಮುಂದಿನ ತಿಂಗಳು ಅಂದರೆ ಮಾರ್ಚ್ 1 ಭಾನುವಾರದಂದು ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿ ಸಿ.ಎನ್ ಅಶ್ವಥ್ ನಾರಾಯಣ್ ಅವರು ಈ ಫೌಂಡೇಶನ್ ನನ್ನು ಉದ್ಘಾಟಿಸಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಸಂಸದರಾದ ತೇಜಸ್ವಿ ಸೂರ್ಯ ಅವರು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಫೌಂಡೇಶನ್ ನ ಸದಸ್ಯರಾದ ಬೀಮಾ ಜಾನ್ ಯೂಸೇಫ್ ಅವರು ಮಾತನಾಡಿ, ಟೈಪ್ 1 ಡಯಾಬಿಟಿಸ್ ಆಫ್ ಇಂಡಿಯಾ ಸ್ಥಾಪನೆ ಮಾಡಬೇಕೆಂದು ಬಹಳ ವರ್ಷಗಳಿಂದ ನಮ್ಮ ನಡುವೆಯೇ ಬಹಳಷ್ಟು ಚರ್ಚೆಗಳು ನಡೆದಿವೆ. ಈ ಕಾಯಿಲೆಯಿಂದ ಬಳಲುತ್ತಿರುವ ಬಡ ಮಕ್ಕಳಿಗಾಗಿ ಏನಾದರೂ ಮಾಡಲೇಬೇಕೆಂಬ ಉದ್ದೇಶದಿಂದ ಈ ಫೌಂಡೇಶನನ್ನು ಸ್ಥಾಪನೆ ಮಾಡಲಾಗುತ್ತಿದೆ. ಕಳೆದ ವರ್ಷ ನವೆಂಬರಲ್ಲಿ ಫೌಂಡೇಶನ್ ಲಾಂಚ್ ಬಗ್ಗೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಈ ಮುಖೇನ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಮುಖ್ಯವಾಗಿ ಗ್ರಾಮಾಂತರ ಭಾಗದಲ್ಲಿ ಟೈಪ್ 1 ಡಯಾಬಿಟಿಸ್ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಫೌಂಡೇಶನ್ ಸದಸ್ಯ ಪ್ರಶಾಂತ್, ಹಿರಿಯರಿಗೆ ಬರುವ ಡಯಾಬಿಟಿಕ್ ಬೇರೆ, ಮಕ್ಕಳಿಗೆ ಬರುವ ಡಯಾಬಿಟಿಕ್ ಬೇರೆ. ಟೈಪ್ 1 ಡಯಾಬಿಟಿಕ್ ಗೆ ಚಿಕಿತ್ಸೆ ನೀಡಲು ವಿಶೇಷ ತಜ್ಞರು ಬೇಕಾಗಿದ್ದಾರೆ. ಈ ಫೌಂಡೇಶನ್ ಅಗತ್ಯವಿರುವ ಚಿಕಿತ್ಸೆಗಳ ಬಗ್ಗೆ, ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲಿದೆ ಎಂದರು.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್ ನ ಸದಸ್ಯರಾದ ಬೀನು ಸಿಂಗ್, ಕೀರ್ತಿ ಚಂದ್ರ, ಗೀತಾಂಜಲಿ ಅವರು ಉಪಸ್ಥಿತರಿದ್ದರು.