ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಭಾರತದ ಐಪಿಎಲ್ ಟೂರ್ನಿ ಶಿಫ್ಟ್…?
ಕೋವಿಡ್ -19 ಸೋಂಕಿನ ಹಾವಳಿಯ ನಡುವೆಯೂ ಬಿಸಿಸಿಐ ಪ್ರತಿಷ್ಠಿತ 2020ನೇ ಸಾಲಿನ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಶುಕ್ರವಾರ ನಡೆದ ಬಿಸಿಸಿಐ ಅಪೆಕ್ಸ್ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ಸಂಘಟಿಸುವುದು ಅಸಾಧ್ಯವಾಗಿದೆ. ಹೀಗಾಗಿ ಯುಎಇನಲ್ಲಿ 2020ರ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡುವುದರ ಬಗ್ಗೆ ಬಿಸಿಸಿಐ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಇನ್ನು ಟೀಮ್ ಇಂಡಿಯಾ ಆಟಗಾರರು ಕಳೆದ ನಾಲ್ಕೈದು ತಿಂಗಳುಗಳಿಂದ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದಾರೆ. ಹೀಗಾಗಿ ಅಭ್ಯಾಸಕ್ಕಾಗಿ ದುಬೈ, ಅಹಮಾದಾಬಾದ್ ಮತ್ತು ಧರ್ಮಶಾಲಾದಲ್ಲಿ ತರಬೇತಿ ನಡೆಸಲು ಬಿಸಿಸಿಐ ಮುಂದಿರುವ ಅವಕಾಶಗಳಾಗಿವೆ. ಇನ್ನು ಭಾರತದಲ್ಲಿ ಟೂರ್ನಿಯನ್ನು ಸಂಘಟಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದು. ಒಂದು ವೇಳೆ ಅದು ಅಸಾಧ್ಯವಾದ್ರೆ ಯುಎಇನಲ್ಲಿ ಸಂಘಸಿಸಲಾಗುತ್ತದೆ. ಈ ಬಗ್ಗೆ ಬಿಸಿಸಿಐ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮ
ನಿರ್ಧಾರವನ್ನು ಐಪಿಎಲ್ ಗವರ್ನಿಂಗ್ ಸಮಿತಿ ನಿರ್ಧರಿಸಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ನಡೆಸುವುದು ಅಸಾಧ್ಯವಾಗಿದೆ. ಹೀಗಾಗಿ ಯುಎಇ ನಮ್ಮ ಮೊದಲ ಆಯ್ಕೆಯಾಗಿದೆ. ಟೂರ್ನಿಗಿಂತ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸಬೇಕಾಗಿದೆ. ಇದಕ್ಕೆ ಸೂಕ್ತ ಸ್ಥಳ ದುಬೈ. ಅಲ್ಲಿ ಅತ್ಯುತ್ತಮ ಮಟ್ಟದ ಮೂಲ ಸೌಲಭ್ಯಗಳಿವೆ. ಹಾಗೇ ಧರ್ಮಶಾಲಾ ಅಥವಾ ಅಹಮಾದಾಬಾದ್ ನಲ್ಲಿ ಜೈವಿಕ ಸುರಕ್ಷತೆಯನ್ನಿಟ್ಟುಕೊಂಡು ಅಭ್ಯಾಸ ನಡೆಸುವುದರ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಬಿಸಿಸಿಐನ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಯಾವುದಕ್ಕೂ ಐಪಿಎಲ್ ಭವಿಷ್ಯ ನಿರ್ಧಾರವಾಗೋದು ಐಸಿಸಿ ನಿರ್ಧಾರ ಮೇಲೆ. ಮುಂದಿನ ವಾರ ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ ನ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ಹೀಗಾಗಿ ಅಲ್ಲಿಯ ತನಕ ಬಿಸಿಸಿಐ ಕಾಯಲೇಬೇಕು. ಒಂದು ವೇಳೆ ಟಿ-ಟ್ವೆಂಟಿ ವಿಶ್ವಕಪ್ ರದ್ದುಗೊಂಡ್ರೆ ಅದೇ ಅವಧಿಯಲ್ಲಿ ಅಂದ್ರೆ ಅಕ್ಟೋಬರ್ -ನವೆಂಬರ್ ನಲ್ಲಿ ಐಪಿಎಲ್ ಆಯೋಜನೆ ಮಾಡುವ ನಿರ್ಧಾರಕ್ಕೂ ಬರಬಹುದು. ಅಂದ ಹಾಗೇ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಐದರಿಂದ ಆರು ವಾರಗಳರವರೆಗೆ ಕಡಿತ ಮಾಡುವ ಸಾಧ್ಯತೆಯೂ ಇದೆ.








