ಭಾರತ ಸೇರಿದಂತೆ ಇತರೇ ರಾಷ್ಟ್ರಗಳಿಗೆ ವೀಸಾ ಪುನರಾರಂಭಿಸಿದ ಯುಎಇ
ಕೊರೊನಾದಿಂದ ನೆಲಕಚ್ಚಿರುವ ಪ್ರವಾಸೊದ್ಯಮಕ್ಕೆ ಮತ್ತೆ ಉತ್ತೇಜನ ನೀಡಲು ಮುಂದಾಗಿರುವ ಯುಎಇ ಸರ್ಕಾರವು ಇಂದಿನಿಂದ ಭಾರತ ಸೇರಿದಂತೆ ಇತರೇ ರಾಷ್ಟ್ರಗಳಿಗೆ ವೀಸಾ ಪುನರಾರಂಭಿಸಿರುವುದಾಗಿ ಘೋಷಣೆ ಮಾಡಿದೆ. ಹೌದು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿರುವ ಪ್ರವಾಸಿಗರಿಗೆ ವೀಸಾ ಸೇವೆ ಪುನರಾರಂಭಿಸಿರುವುದಾಗಿ ತಿಳಿಸಿದೆ. ದೇಶದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿರುವುದರಿಂದ ಯುಎಇ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ. ಕಳೆದ ವಾರದಿಂದ 1000ಕ್ಕಿಂದ ಕಡಿಮೆ ಕೇಸ್ ಗಳು ದಾಖಲಾಗ್ತಿದೆ.. 92 % ರಷ್ಟು ಜನರು ಲಸಿಕೆ ಪಡೆದಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ವಿಶ್ವದಲ್ಲಿ ಮಾಲ್ಟಾ ಬಿಟ್ರೆ ಯುಎಇ 2ನೇ ಸ್ಥಾನದಲ್ಲಿದೆ.
ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಮತ್ತು ಸಿಟಿಜನ್‌ಶಿಪ್ (ಐಸಿಎ) ಮತ್ತು ರಾಷ್ಟ್ರೀಯ ತುರ್ತುಸ್ಥಿತಿ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಸಿಇಎಂಎ) ಜಂಟಿಯಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನುಮೋದಿತ ಲಸಿಕೆಗಳನ್ನು ಪಡೆದ ಎಲ್ಲಾ ದೇಶಗಳ ಜನರಿಗೆ ಪ್ರವಾಸಿ ವೀಸಾಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಘೋಷಿಸಿದೆ. “ಇದು ಸಾರ್ವಜನಿಕ ಆರೋಗ್ಯ ಮತ್ತು ಪ್ರಮುಖ ವಲಯಗಳ ಚಟುವಟಿಕೆಗಳ ನಡುವೆ ಸಮತೋಲನವನ್ನು ಸೃಷ್ಟಿಸುವ ದೇಶದ ಕಾರ್ಯತಂತ್ರದ ಭಾಗ. ಸುಸ್ಥಿರ ಚೇತರಿಕೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ರಾಷ್ಟ್ರೀಯ ಪ್ರಯತ್ನಗಳಿಗೆ ಬೆಂಬಲ ಎಂದು ಯುಎಇ ಸರ್ಕಾರವು ಪ್ರಕಟಿಸಿರುವುದಾಗಿ ಯುಎಇಯ ಅಧಿಕೃತ ಸುದ್ದಿ ಸಂಸ್ಥೆ WAM ವರದಿ ಮಾಡಿದೆ.
ಜೂನ್ 3 ರ ಹೊತ್ತಿಗೆ, ಡಬ್ಲ್ಯುಎಚ್‌ಒ ಅನುಮೋದಿಸಿದ ಕೋವಿಡ್ -19 ಲಸಿಕೆಗಳಲ್ಲಿ ಆಸ್ಟ್ರಾಜೆನೆಕಾ/ಆಕ್ಸ್‌ಫರ್ಡ್/ಕೋವಿಶೀಲ್ಡ್, ಜಾನ್ಸನ್ ಮತ್ತು ಜಾನ್ಸನ್, ಮಾಡರ್ನಾ, ಫೈಜರ್/ಬಯೋಟೆಕ್, ಸಿನೋಫಾರ್ಮ್ ಮತ್ತು ಸಿನೋವಾಕ್ ಸೇರಿವೆ. “ಪ್ರವಾಸಿ ವೀಸಾಗಳಲ್ಲಿ ಬರುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು” ಎಂದು WAM ವರದಿಯಲ್ಲಿ ತಿಳಿಸಿದೆ.








