ಇಡೀ ದೇಶವನ್ನೇ ಬೆಚ್ಚಿ ಬೀಳಿಸಿ ಆಕ್ರೋಶ ಭುಗಿಲೇಳಿಸಿರುವ ಉದಯಪುರ್ (Udaypur Case) ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ ವಿರೋಧಿಸಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು , ಜಸ್ಟಿಸ್ ಫಾರ್ ಕನ್ಹಯ್ಯ ಲಾಲ್ ಟ್ರೆಂಡ್ ಆಗ್ತಿದೆ..
ಇನ್ನೂ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿದ ಕೃತ್ಯವನ್ನು ವಿಧಾನಸಭೆಯ ಸರ್ವಪಕ್ಷ ಸದಸ್ಯರು ತೀವ್ರವಾಗಿ ಖಂಡಿಸಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ಕನ್ಹಯ್ಯ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿ ಗೆಹಲೋಟ್ ಅವರ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ, ಇದೊಂದು ಭಯೋತ್ಪಾದನೆಯ ಕೃತ್ಯ. ಹಂತಕರಿಗೆ ಅಂತರರಾಷ್ಟ್ರೀಯ ಉಗ್ರ ಸಂಘಟನೆಗಳ ಜೊತೆಗಿರುವ ಸಂಬಂಧಗಳ ಬಗ್ಗೆ ತನಿಖೆ ನಡೆಸಬೇಕು. ವಿಳಂಬಿಸದೆ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಲಾಗಿದೆ.
ರಾಜ್ಯದಲ್ಲಿ ಶಾಂತಿ ಮತ್ತು ಸಂಯಮ ಕಾಪಾಡುವಂತೆ ಮನವಿ ಮಾಡಲಾಗಿದೆ. ಘಟನೆಗೆ ಸಂಬಧಿಸಿ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ. ಭಯೋತ್ಪಾದನಾ ನಿಗ್ರಹ ದಳ ಮತ್ತು ರಾಜಸ್ಥಾನ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣಾ ತಂಡ ಎನ್‌ಐಎ ಜೊತೆ ತನಿಖೆಗೆ ಸಹಕರಿಸುತ್ತಿವೆ ಎಂದು ಗೆಹಲೋತ್ ಹೇಳಿದ್ದಾರೆ.








