ಮುಂಬೈ : ಕೊರೊನಾ ವೈರಸ್ ನಿಂದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಸಿಎಂ ಖುರ್ಚಿ ಅಲುಗಾಡುತ್ತಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕಾದರೆ ಉದ್ಧವ್ ಠಾಕ್ರೆ ಅವರು ಮೇ 28ಕ್ಕೂ ಮುನ್ನ ವಿಧಾನ ಪರಿಷತ್ ಗೆ ಆಯ್ಕೆಯಾಗಬೇಕಿದೆ. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.
ಹೀಗಾಗಿ ರಾಜ್ಯಪಾಲರ ಕೋಟಾದಲ್ಲಿ ಠಾಕ್ರೆ ಅವರನ್ನು ನಾಮನಿರ್ದೇಶನ ಮಾಡುವ ಬಗ್ಗೆ ಮಹಾರಾಷ್ಟ್ರ ಸಚಿವ ಸಂಪುಟ ಏಪ್ರಿಲ್ ಆರಂಭದಲ್ಲಿ ಮೊದಲ ಶಿಫಾರಸು ಮಾಡಿತ್ತು. ಈ ವಿಚಾರದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಂದ ಸಹಕಾರ ಸಿಗದ ಹಿನ್ನೆಲೆಯಲ್ಲಿ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ‘ಕೊರೊನಾ ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರದಂತಹ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸುವುದು ಸರಿಯಲ್ಲ’ ಎಂದು ಮೋದಿ ಬಳಿ ಠಾಕ್ರೆ ಹೇಳಿಕೊಂಡಿದ್ದಾರಂತೆ.
ಬುಧವಾರ ಕೂಡ ರಾಜ್ಯಪಾಲರ ಕೋಟಾದಲ್ಲಿ ನಾಮನಿರ್ದೇಶನ ಮಾಡುವಂತೆ ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ ನಾಯಕರು ಕೋಶಿಯಾರಿ ಅವರನ್ನು ಭೇಟಿಯಾಗಿ ಎರಡನೇ ಬಾರಿಗೆ ಮನವಿ ಮಾಡಿದ್ದರು. ಇದಾದ ಮರುದಿನವೇ ಠಾಕ್ರೆ ಪ್ರಧಾನಿಗೆ ಕರೆ ಮಾಡಿ ಮಾತನಾಡಿದ್ದಾರೆ. ಕಾನೂನಿನ ಪ್ರಕಾರ ಸಚಿವಸಂಪುಟ ಶಿಫಾರಸನ್ನು ಅನುಮೋದಿಸಬೇಕಾದ್ದು ರಾಜ್ಯಪಾಲರ ಕರ್ತವ್ಯ. ಆದರೆ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಮಹಾ ವಿಕಾಸ್ ಅಘಾಡಿ ನಾಯಕರು ಆರೋಪಿಸಿದ್ದಾರೆ.








