ಮುಂಬೈ : ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಯಿಂದ ಸರ್ಕಾರ ರಚನೆಯಾಗಿದ್ದು, ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಆರು ತಿಂಗಳ ಒಳಗೆ ಅವರು ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗುವ ಅನಿವಾರ್ಯತೆ ಇತ್ತು.
ಇದೀಗ ವಿಧಾನ ಪರಿಷತ್ ಸದಸ್ಯರಾಗಿ ಅವರು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸಿಎಂ ಕುರ್ಚಿಯನ್ನು ಭದ್ರಪಡಿಸಿಕೊಂಡಿದ್ದಾರೆ.
ಕಳೆದ ಏಪ್ರಿಲ್ 24ರಂದು ತೆರವಾಗಿದ್ದ ಒಂಬತ್ತು ವಿಧಾನಪರಿಷತ್ ಸ್ಥಾನಗಳಿಗೆ ಮೇ 21ರಂದು ಚುನಾವಣೆ ನಿಗದಿಯಾಗಿತ್ತು. ಈ 9 ಸ್ಥಾನಗಳಿಗೆ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ ತಾಂತ್ರಿಕ ನೆಲೆಯಲ್ಲಿ ಐದು ನಾಮಪತ್ರಗಳನ್ನು ತಿರಸ್ಕರಿಸಲಾಗಿತ್ತು. ಹೀಗಾಗಿ 9 ಸ್ಥಾನಗಳಿಗೆ ಕೇವಲ ಒಂಬತ್ತು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರು.ವಿಧಾನ ಪರಿಷತ್ ಚುನಾವಣಾ ಕಣದಲ್ಲಿದ್ದ 9 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಶಿವಸೇನೆ ಉದ್ಧವ್ ಠಾಕ್ರೆ ಮತ್ತು ವಿಧಾನ ಪರಿಷತ್ತಿನ ಉಪ ಸಭಾಧ್ಯಕ್ಷೆ ನೀಲಂ ಗೋರೆ ಅವರನ್ನು ಆಯ್ಕೆ ಮಾಡಿದ್ದು, ಎನ್‌ಸಿಪಿ ಅಮೋಲ್ ಮಿಟ್ಕರಿ ಮತ್ತು ಶಶಿಕಾಂತ್ ಶಿಂಧೆ ಅವರನ್ನು ನೇಮಕ ಮಾಡಿದ್ದರೆ, ಕಾಂಗ್ರೆಸ್ ರಾಜೇಶ್ ರಾಥೋಡ್ ಅವರನ್ನು ಆಯ್ಕೆ ಮಾಡಿದೆ.