ಪಚ್ಚಿಲೆ ಅಜೀರ್ ಮೀನು ಹಿಡಿಯುತ್ತಿದ್ದ ಅನ್ಯರಾಜ್ಯದ ಮೀನುಗಾರರ ಬಂಧನ
ಉಡುಪಿ: ಸಮುದ್ರತೀರದಲ್ಲಿ ನಿಷೇಧಿತ ಪಚ್ಚಿಲೆ ಅಜೀರ್ ಮೀನು (ಪರ್ನವಿಡೀಸ್) ತೆಗೆಯುತ್ತಿದ್ದ ಅನ್ಯರಾಜ್ಯದ ಏಳು ಮೀನುಗಾರರನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದ ಬಂಡೆ ಕಲ್ಲಿಗೆ ಅಂಟಿಕೊಂಡಿರುವ ಪಚ್ಚಿಲೆ ಅಜೀರ್ ಮೀನನ್ನು ತಮಿಳುನಾಡಿನ ಮೀನುಗಾರರು ತೆಗೆಯುತ್ತಿದ್ದರು. ಈ ವಿಷಯವನ್ನು ತಿಳಿದ ಸ್ಥಳೀಯ ಮೀನುಗಾಗರರು ಅವರನ್ನು ಹಿಡಿದು ಉಚ್ಚಿಲದ ಸುಭಾಷ್ ರಸ್ತೆ ಬಳಿಯ ಸಮುದ್ರ ಕಿನಾರೆಗೆ ತಂದಿದ್ದರು. ಬಳಿಕ ಪಡುಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರ ವಶಕ್ಕೆ ನೀಡಿದ್ದಾರೆ. ಸದ್ಯ ಅವರು ಮೀನು ಹಿಡಿಯಲು ಬಳಸುತ್ತಿದ್ದ ದೋಣಿಯನ್ನು ಕೂಡ ದಂಡೆಗೆ ತಂದು ನಿಲ್ಲಿಸಲಾಗಿದೆ.
ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಬಂಡೆಗೆ ಅಂಟಿಕೊಂಡಿರುವ ಈ ಜಾತಿಯ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಬಂಡೆಗೆ ಅಂಟಿಕೊಂಡಿರುವ ಪಚ್ಚಿಲೆ ಮೀನನ್ನು ತಿನ್ನಲು ನಾನಾ ಜಾತಿಯ ಮೀನುಗಳು ಸಮುದ್ರ ತೀರಕ್ಕೆ ಬರುತ್ತವೆ. ತೀರ ಪ್ರದೇಶಕ್ಕೆ ಬರುವ ಇಂತಹ ಮೀನುಗಳನ್ನು ಹಿಡಿದು ಮೀನುಗಾರರು ತಮ್ಮ ದೈನಂದಿನ ಮೀನುಗಾರಿಕೆ ನಡೆಸುತ್ತಾರೆ. ಒಂದು ವೇಳೆ ಪಚ್ಚಿಲೆ ಮೀನು ತೆರವುಗೊಳಿಸಿದರೆ ತೀರ ಪ್ರದೇಶಕ್ಕೆ ಬರುವ ಮೀನುಗಳ ಸಂಖ್ಯೆ ಇಳಿಮುಖವಾಗುತ್ತದೆ. ಹಾಗಾಗಿ ಸ್ಥಳೀಯ ಮೀನುಗಾರರು ಯಾರೂ ಪಚ್ಚಿಲೆ ಮೀನನ್ನು ತೆಗೆಯುವುದಿಲ್ಲ.
ಹೆಚ್ಚಾಗಿ ತಮಿಳುನಾಡು ಭಾಗದಿಂದ ಬರುವ ಮೀನುಗಾರರು ಇವುಗಳನ್ನು ಹಿಡಿಯುತ್ತಾರೆ. ಒಂದು ಪುಟ್ಟ ಗೋಣಿ ಚೀಲ ಮೀನಿಗೆ ಸುಮಾರು 9 ರಿಂದ 10 ಸಾವಿರ ರೂಪಾಯಿ ಬೆಲೆ ಇರುತ್ತದೆ. ಕೇರಳದಲ್ಲಿ ಈ ಮೀನು ಸುಮಾರು 15 ಸಾವಿರ ರೂ.ಗೂ ಹೆಚ್ಚು ಬೆಲೆಯಲ್ಲಿ ಮಾರಾಟವಾಗುತ್ತದೆ. ಅವುಗಳ ಸಂತತಿ ಉಳಿಸುವ ದೃಷ್ಟಿಯಿಂದ ಈ ಮೀನನ್ನು ಕರ್ನಾಟಕ ಕರಾವಳಿಯ ಮೀನುಗಾರರು ಉಳಿಸಿಕೊಂಡು ಬಂದಿದ್ದಾರೆ. ಆದರೆ, ತಮಿಳುನಾಡಿನ ಮೀನುಗಾರರು ಇದನ್ನು ಹಿಡಿದು ದಲ್ಲಾಳಿಗಳಿಗೆ ಮಾರಾಟ ಮಾಡುತ್ತಾರೆ.









