UK prime minister- 5ನೇ ಸುತ್ತಿನಲ್ಲೂ ಅಗ್ರಸ್ಥಾನ ಪಡೆದ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ
ಇನ್ಫೋಸಿಸ್ ನಾರಾಯಣ ಮೂರ್ತಿ ಯವರ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ರೇಸ್‌ನ ಐದನೇ ಸುತ್ತಿನಲ್ಲೂ ಎಲ್ಲರಿಗಿಂತ ಹೆಚ್ಚು ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ.
ಇದರಿಂದಾಗಿ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಗದ್ದುಗೆಗೇರುವ ಕ್ಷಣಗಳು ಮತ್ತಷ್ಟು ಹತ್ತಿರವಾಗಿದೆ.
ಐದನೇ ಸುತ್ತಿನ ಮತದಾನದಲ್ಲಿ ರಿಷಿ ಸುನಕ್ 137 ಮತಗಳನ್ನು ಪಡೆದು, 113 ಮತಗಳನ್ನು ಪಡೆದಿರುವ ಲಿಜ್ ಟ್ರಸ್ ಮತ್ತು 105 ಮತಗಳನ್ನು ಪಡೆದಿರುವ ಪೆನ್ನಿ ಮೊರ್ಡಾಂಟ್ ಗಿಂತ ಮುನ್ನಡೆ ಸಾಧಿಸಿದ್ದಾರೆ.
ನಿಯಮಗಳ ಪ್ರಕಾರ, 5 ನೇ ಸುತ್ತಿನಲ್ಲಿ ಕಡಿಮೆ ಮತ ಪಡೆದ ಪೆನ್ನಿ ಮೊರ್ಡಾಂಟ್ ಪ್ರಧಾನಿ ರೇಸ್‌ನಿಂದ ಹೊರಬಿದ್ದಿದ್ದು, ಅಂತಿಮ ಸುತ್ತಿನಲ್ಲಿ ರಿಷಿ ಸುನಕ್, ಲಿಜ್ ಟ್ರಸ್ ಅವರನ್ನು ಎದುರಿಸಲಿದ್ದಾರೆ.
ಹಗರಣಗಳ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ನಾಯಕನ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಸೆಪ್ಟೆಂಬರ್ 5ರಂದು ಪ್ರಧಾನಿ ಅಭ್ಯರ್ಥಿಯ ಘೋಷಣೆಯಾಗಲಿದ್ದು, ಅಲ್ಲಿಯವರೆಗೂ ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆಯಲ್ಲಿ ಇರುತ್ತಾರೆ.