ಉಕ್ರೇನ್ ಬಿಕ್ಕಟ್ಟು – ಭಾರತೀಯರನ್ನ ಕರೆತರಲು ವಿಮಾನ ಕಳುಹಿಸಿದ ಸ್ಪೈಸ್ ಜೆಟ್
ರಷ್ಯಾದ ಸೇನಾ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಸ್ಪೈಸ್‌ಜೆಟ್ ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ಗೆ ವಿಶೇಷ ವಿಮಾನವನ್ನು ಕಳುಹಿಸಿಕೊಡಲಿದೆ.
ಫೆಬ್ರವರಿ 24 ರಿಂದ ಮಿಲಿಟರಿ ದಾಳಿ ಪ್ರಾರಂಭವಾದಾಗಿನಿಂದ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಹಾಗಾಗಿ ಉಕ್ರೇನ್‌ನೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳು, ರೊಮೇನಿಯಾ ಮತ್ತು ಹಂಗೇರಿಯಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಶನಿವಾರದಿಂದ ಪ್ರಾರಂಭಿಸಿದೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಇದುವರೆಗೆ ಐದು ವಿಮಾನಗಳಲ್ಲಿ ಒಟ್ಟು 1,156 ಭಾರತೀಯ ಪ್ರಜೆಗಳನ್ನು ಕರೆತಂದಿದೆ.
240 ಭಾರತೀಯ ಪ್ರಜೆಗಳನ್ನ ಹೊತ್ತ ಆರನೇ ವಿಮಾನ ಸೋಮವಾರ ಸಂಜೆ ದೆಹಲಿಗೆ ಇಳಿಯಲಿದೆ. ಸುಮಾರು 14,000 ಭಾರತೀಯರು, ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು, ಪ್ರಸ್ತುತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಸೋಮವಾರ ಸಂಜೆ ದೆಹಲಿಯಿಂದ ಹೊರಡಲಿರುವ ಈ ವಿಶೇಷ ವಿಮಾನಕ್ಕೆ ತನ್ನ ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಬಳಸುವುದಾಗಿ ಸ್ಪೈಸ್ ಜೆಟ್ ತಿಳಿಸಿದೆ.
“ವಿಮಾನವು ದೆಹಲಿಯಿಂದ ಬುಡಾಪೆಸ್ಟ್‌ಗೆ ಹಾರಲಿದೆ, ಹಿಂತಿರುಗುವ ವಿಮಾನವು ಜಾರ್ಜಿಯಾದ ಕುಟೈಸಿ ಮೂಲಕ ಕಾರ್ಯನಿರ್ವಹಿಸುತ್ತದೆ” ಎಂದು ಸ್ಪೈಸ್ ಜೆಟ್ ಹೇಳಿದೆ. ವಿದ್ಯಾರ್ಥಿಗಳನ್ನ ಕರೆತರಲು ಹೆಚ್ಚಿನ ವಿಮಾನಗಳನ್ನು ನಿರ್ವಹಿಸಲು ಯೋಜಿಸುತ್ತಿದೆ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಸ್ಪೈಸ್‌ಜೆಟ್ ಹೇಳಿದೆ.