ಉಕ್ರೇನ್ ಮೇಲೆ ರಷ್ಯಾ ದಾಳಿ ಅಪ್ ಡೇಟ್ಸ್
01 . ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ್ದು, ಉಕ್ರೇನ್ ಕಾದ ಕೆಂಡದಂತೆ ಆಗಿದೆ. ಇಂದು ಬೆಳಿಗ್ಗೆ ಆರು ಗಂಟೆಗೆ ಸರಿ ಸುಮಾರಿಗೆ ಮಾಧ್ಯಮಗಳ ಮುಂದೆ ಬಂದ ರಷ್ಯಾ ಅಧ್ಯಕ್ಷ ಪುಟಿನ್, ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದರು.
02. ರಷ್ಯಾ – ಉಕ್ರೇನ್ ಮೇಲೆ ಯುದ್ಧ ಘೋಷಿಸುತ್ತಿದ್ದಂತೆ ಮಾಸ್ಕೋ ಮತ್ತು ಉಕ್ರೇನ್ ನಡುವಿನ ರಾಜತಾಂತ್ರಿಕ ಸಂಬಂಧ ಮುರಿದು ಬಿದ್ದಿದೆ. ಇತ್ತ ರಷ್ಯಾ- ಉಕ್ರೇನ್ ಯುದ್ಧ ವಿಚಾರವಾಗಿ ಇತರ ರಾಷ್ಟ್ರಗಳು ಮೂಗುತೂರಿಸಬೇಡಿ ಎಂದು ಪುಟಿನ್ ನೇರವಾಗಿ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
03. ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸುತ್ತಿದ್ದಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್‍ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಉಕ್ರೇನ್‍ನಿಂದ ಜನ ಮಹಾವಲಸೆ ಆರಂಭಿಸಿದ್ದಾರೆ. ರಷ್ಯಾದ 5 ಯುದ್ಧ ವಿಮಾನ, 2 ಹೆಲಿಕಾಪ್ಟರ್, ಟ್ಯಾಂಕ್ ಮತ್ತು ಟ್ರಕ್‍ಗಳನ್ನು ಈಗಾಗಲೇ ಉಕ್ರೇನ್ ಮಿಲಿಟರಿ ಪಡೆ ಹೊಡೆದುರುಳಿಸಿದೆ.
04. ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಸಾರಿದ್ದು, ಉಕ್ರೇನ್ ನಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಈ ನಡುವೆ ಉಕ್ರೇನ್‌ನ ರಾಯಭಾರಿ ಇಗೊರ್ ಪೊಲಿಖಾ ಅವರು ಭಾರತದ ತುರ್ತು ಮಧ್ಯಸ್ಥಿಕೆಗೆ ಮನವಿ ಮಾಡಿಕೊಂಡಿದ್ದಾರೆ. “ಭಾರತವು ಅತ್ಯಂತ ಪ್ರಭಾವಿ ಜಾಗತಿಕ ದೇಶವಾಗಿದೆ. ನಾವು ಭಾರತದ ಪ್ರಬಲ ಧ್ವನಿಯ ನೆರವಿನ ನಿರೀಕ್ಷೆಯಲ್ಲಿದ್ದೇವೆ” ಎಂದು ಹೇಳಿದ್ದಾರೆ.
05. ಉಕ್ರೇನ್ ಮೇಲೆ ರಷ್ಯಾ ಯುದ್ಧದ ಘೋಷಣೆ ಬೆನ್ನಲ್ಲೇ ಭಾರತೀಯ ಶೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಜಾಗತಿಕ ಮಟ್ಟದಲ್ಲಿ ಪೆಟ್ರೋಲ್, ಚಿನ್ನ, ಬೆಳ್ಳಿಯ ಬೆಲೆಗಳು ಗಗನಕ್ಕೆ ಏರಿವೆ. 2,000ಕ್ಕೂ ಅಧಿಕ ಪಾಯಿಂಟ್ಸ್ ಸೆನ್ಸೆಕ್ಸ್ ಕುಸಿತ ಕಂಡರೆ ನಿಫ್ಟಿ 600 ಪಾಯಿಂಟ್ಸ್ ಕುಸಿದಿದೆ.
06. ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿ ಯುದ್ಧ ಆರಂಭವಾದ ಹಿನ್ನೆಲೆ ಇಬ್ಬರು ಕುಟುಂಬಸ್ಥರ ಮನೆಯಲ್ಲಿ ಆತಂಕ ಮನೆಮಾಡಿದೆ. ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ನಿವಾಸಿ ಪ್ರಿಯಾ ನಿಡಗುಂದಿ ಹಾಗೂ ಗೋಕಾಕ್ ತಾಲೂಕಿನ ಘಟಪ್ರಭಾದ ನಿವಾಸಿ ಅಮೋಘಾ ಚೌಗಲಾ ಎಂಬ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.
07. ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಉಕ್ರೇನ್ ವಿಮಾನ ನಿಲ್ದಾಣದಲ್ಲಿ 100 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಇವರಲ್ಲಿ 10 ಕ್ಕಿಂತ ಹೆಚ್ಚು ಕನ್ನಡಿಗರಿದ್ದು, ಅವರ ಸಂಪೂರ್ಣ ಮಾಹಿತಿ ಕಲೆಹಾಕಲಾಗಿದೆ ಎಂದರು.
08. ಉಕ್ರೇನ್ ನಲ್ಲಿ ನೆಲೆಸಿದ್ದ ಭಾರತೀಯರು ಏರ್ ಇಂಡಿಯಾ ವಿಮಾನದ ಮೂಲಕ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ, ಭಾರತ ಸರ್ಕಾರ ಉಕ್ರೇನ್‍ನಲ್ಲಿ ನೆಲೆಸಿರುವ ಭಾರತೀಯರು ದೇಶ ತೊರೆಯುವಂತೆ ಮನವಿ ಮಾಡಿ, ವಿಶೇಷ ವಿಮಾನ ವ್ಯವಸ್ಥೆ ಮಾಡಿತ್ತು.
09. ಕನ್ನಡಿಗ ಮಯಾಂಕ್ ಅಗರ್ ವಾಲ್ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮುಂದಿನ ವಾರ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ.
10. ‘ಸಂಜು ಸ್ಯಾಮ್ಸನ್ ಅಪ್ರತಿಮ ಪ್ರತಿಭೆ ಹೊಂದಿದ್ದಾರೆ. ಅವರ ಬ್ಯಾಟಿಂಗ್ ನೋಡಿದಾಗಲೆಲ್ಲ ಸಂತಸವಾಗುತ್ತದೆ ಎಂದು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ 20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದಾರೆ.









