Umesh katti | ಸ್ವಾಮೀಜಿಗಳ ಮೇಲೆ ಆರೋಪ ಮಾಡಿದ್ದು ತಪ್ಪು
ವಿಜಯಪುರ : ಸ್ವಾಮೀಜಿಗಳ ಮೇಲೆ ಆರೋಪ ಮಾಡಿದ್ದು ತಪ್ಪು. ರಾಜ್ಯದಲ್ಲಿ ಒಂದಿಬ್ಬರು ಸ್ವಾಮೀಜಿಗಳು ಉಳಿದುಕೊಂಡಿದ್ದಾರೆ. ಸಮಾಜ ತಿದ್ದಬೇಕೆಂಬ ಅವರ ಪ್ರಯತ್ನಗಳಿವೆ. ಅಂಥ ಪ್ರಯತ್ನಗಳಿಗೆ ಇಂಥ ಸಲ್ಲದ ಆರೋಪ ಮಾಡಿ ತೊಂದರೆಗೆ ಸಿಲುಕಿಸಬಾರದು ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಮುರುಘಾ ಶ್ರೀಗಳ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ಬಗ್ಗೆ ವಿಜಯಪುರ ನಗರದಲ್ಲಿ ಉಮೇಶ ಕತ್ತಿ ಪ್ರತಿಕ್ರಿಯೆ ನೀಡಿದ್ದು, ಸಂತ್ರಸ್ಥರೆನ್ನಲಾದ ಬಾಲಕಿಯರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಅದಕ್ಕಿಂತ ಹೆಚ್ಚಿನ ಮಾಹಿತಿ ನನ್ನಲ್ಲಿ ಇಲ್ಲ. ಮರುಘಾ ಶ್ರೀಗಳ ವಿರುಧ್ಧ ಎಫ್ಐಆರ್ ಆಗಲ್ಲ, ಎಫ್ಐಆರ್ ಆದರೆ ನೋಡೋನಾ ಎಂದರು.
ಇದು ಮಠದ ಒಳ ಜಗಳ, ಮಾಜಿ ಶಾಸಕ ಬಸವರಾಜ ಹಾಗೂ ಸ್ವಾಮೀಜಿಗಳ ಜಗಳ. ಇದೀಗ ಅದು ಎಲ್ಲೆಲ್ಲೋ ಹೋಗಿದೆ. ನ್ಯಾಯಾಲಯ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ. ಸಮಾಜವನ್ನು ಬೇರೆ ದಿಕ್ಕಿನಲ್ಲಿ ಒಯ್ಯಬಾರದು ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಚಿರತೆ ಸಿಗದ ಕಾರಣ ಉಮೇಶ್ ಕತ್ತಿ ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿದ ಉಮೇಶ್ ಕತ್ತಿ, ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ. ನಾಳೆ ಬೆಳಿಗ್ಗೆ ನಾನು ರಾಜೀನಾಮೆ ಕೊಡಲು ಸಿದ್ದ ಎಂದು ಹೇಳಿದ್ದಾರೆ.