ಆಸ್ಟ್ರೇಲಿಯಾ ಸರಣಿಗೆ ಉಮೇಶ್ ಯಾದವ್ – 43 ತಿಂಗಳ ನಂತರ ಕಂಬ್ಯಾಕ್ ಸಾಧ್ಯತೆ..
ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಕೊರೊನಾ ಸೋಂಕಿಗೆ ಒಳಗಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಶಮಿಯಿಂದ ತೆರವಾದ ಸ್ಥಾನವನ್ನ ಭಾನುವಾರ ಬೆಳಗ್ಗೆ 7 ಗಂಟೆಗೆ ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಉಮೇಶ್ ಯಾದವ್ ಬದಲಿಸುವ ನಿರೀಕ್ಷೆಯಿದೆ.
ಉಮೇಶ್ ಅವರನ್ನು ಚಂಡೀಗಢಕ್ಕೆ ಕರೆತರಲಾಗಿದ್ದು, ಮಂಗಳವಾರ ಮೊಹಾಲಿಯಲ್ಲಿ ನಡೆಯಲಿರುವ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಸಾದ್ಯತೆ ಇದೆ. ಮೊದಲ ಟಿ20 ಪಂದ್ಯದಲ್ಲಿ ಉಮೇಶ್ ಭಾರತದ ಪ್ಲೇಯಿಂಗ್ ಇಲೆವೆನ್ ಗೆ ಆಯ್ಕೆಯಾದರೆ 43 ತಿಂಗಳ ನಂತರ ಭಾರತಕ್ಕಾಗಿ ನೀಲಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ 2019 ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ T20I ಪಂದ್ಯದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಉಮೇಶ್ ಯಾದವ್ ಭಾರತದ ಸೀಮಿತ ಓವರ್ಗಳ ತಂಡದಿಂದ ಬಹಳ ಕಾಲ ಹೊರಗಿದ್ದ ಮಾತ್ರಕ್ಕೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅವರು ಉತ್ತಮ ಫಾರ್ಮ್ ನಲ್ಲಿಲ್ಲ ಎಂದು ಅರ್ಥವಲ್ಲ. ವಾಸ್ತವವಾಗಿ, ಈ ಋತುವಿನ IPL ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ ಉಮೇಶ್ ಉತ್ತಮ ಬೌಲಿಂಗ್ ಮಾಡಿ ಒಟ್ಟು 16 ವಿಕೆಟ್ ಗಳನ್ನ ಗಳಿಸಿದ್ದರು. ಪವರ್ಪ್ಲೇಯಲ್ಲಿ ಉಮೇಶ್ ಯಾದವ್ ಮಾರಕ ಬೌಲರ್ ಆಗಿ ಹೊರಹೊಮ್ಮಿದ್ದರು.
ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದ ಉಮೇಶ್ ಯಾದವ್ ಕೆಲವು ಸಮಯದ ಹಿಂದೆ ಗಾಯಗೊಂಡಿದ್ದು, ಭಾರತಕ್ಕ ವಾಪಸ್ ಆಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಇದ್ದಕ್ಕಿದ್ದಂತೆ ಅವರನ್ನ ಭಾರತ ತಂಡಕ್ಕೆ ಕರೆತರಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಸೆಪ್ಟೆಂಬರ್ 20 ರಿಂದ ಆರಂಭವಾಗಲಿದೆ.