ಒಂದು ಸಣ್ಣ ಯಶಸ್ಸಿಗೆ ತಲೆತಿರುಗಿ ಹತ್ತಿದ ಏಣಿ ಒದೆಯುವವರನ್ನು ನಾವು ನೋಡಿದ್ದೀವಿ. ಯಶಸ್ಸಿನ ಶಿಖರವನ್ನೇ ಏರಿದ್ದರೂ ಆ ಹಾದಿಯಲ್ಲಿ ತನಗೆ ನೆರವಾದ ಯಾರೊಬ್ಬರನ್ನೂ ಮರೆಯದ ಆ ಕೃತಜ್ಞತೆಯ ಗುಣವಿದೆ ನೋಡಿ. ಅದು, ಬಾಲುರವರನ್ನು ಒಬ್ಬ ಗಾಯಕನಿಗಿಂತಾ ಹೆಚ್ಚಿನವರನ್ನಾಗಿ ಮಾಡಿದ್ದು. ಮೊದಲ ಹಾಡಿನ ರೆಕಾರ್ಡಿಂಗ್ ಸಮಯದಲ್ಲಿ ತನ್ನನ್ನು ಗೇಟಿನ ಬಳಿ ವಾಚ್ಮನ್ ತಡೆದಾಗ ಅವನನ್ನು ಬೇಡಿ ತಾನು ಅವನ ಮುಂದೆ ಕೂತು ಬಾಲುರವರನ್ನು ಸ್ಟುಡಿಯೋ ಒಳಕ್ಕೆ ಹೋಗುವಂತೆ ಮಾಡಿದ ಮುರಳಿ ಈಗಲೂ ಅವರೊಡನೆ ಇರುವ ಜೊತೆಗಾರ.
ತನ್ನನ್ನು ನಂಬಿ ತನಗೆ ಮೊದಲು ಹಾಡಲು ಅವಕಾಶ ಮಾಡಿಕೊಟ್ಟ ಕೋದಂಡಪಾಣಿಯವರ ಹೆಸರನ್ನು ಬಾಲು ತಮ್ಮ ಸ್ಟುಡಿಯೋಗೆ ಇಟ್ಟಿದ್ದಾರೆ. ಸಂಗೀತ ನಿರ್ದೇಶಕ ಸತ್ಯಂ ತಮ್ಮ ನೆನಪಿಗಾಗಿ ಇವರಿಗೆ ಕೊಟ್ಟ ಒಂದು ನಾಟಿ ಹಸುವಿನದು ಇಂದು ಒಂದು ದೊಡ್ಡ ಗೋಶಾಲೆಯೇ ಆಗುವಂತೆ ಮಾಡಿದ್ದಾರೆ. ಎಂ.ಎಸ್.ವಿ ಯವರನ್ನು ತಮಗೆ ಸ್ವರಭಿಕ್ಷೆ ಇಟ್ಟ ತಂದೆ ಎಂದರು , ವೇಟೂರಿಯವರನ್ನು ತಮಗೆ ಅಕ್ಷರಭಿಕ್ಷೆ ಇಟ್ಟ ದೈವ ಎಂದರು. ತಮ್ಮ ಹಾಡುಗಳಿಗೆ ವಾದ್ಯಸಹಕಾರ ಕೊಟ್ಟ ಒಬ್ಬ ಸಣ್ಣ ವಾದಕನ ಹೆಸರನ್ನೂ ಬಿಡದೆ ಹೇಳುತ್ತಿದ್ದರು.
ಜೇಸುದಾಸ್ , ಬಾಲಮುರಳಿಕೃಷ್ಣ , ಸುಶೀಲ , ಜಾನಕಿಯವರಿಗೆ ಪಬ್ಲಿಕ್ಕಾಗಿ ಕಾಲಿಗೆ ಬೀಳುತ್ತಿದ್ದರು. ಅಷ್ಟು ನಿಗರ್ವಿ ಅವರು. ಕೆ.ವಿಶ್ವನಾಥ್ ರನ್ನು ತಮ್ಮ ಸ್ವಂತ ಅಣ್ಣನೆಂದೇ ಪರಿಚಯಿಸಿಕೊಳ್ಳುತ್ತಿದ್ದರು.ಸಾಂಬಮೂರ್ತಿ ಯಾರೆಂದು ನಮಗೆಲ್ಲಾ ಗೊತ್ತಿತ್ತೇ!? ಬಾಲು ರವರ ತಂದೆಯಾಗಿ ಅವರು ನಮ್ಮೆಲ್ಲರ ಗೌರವ ಸಂಪಾದಿಸಿದರು. ನೆಲ್ಲೂರಿನಲ್ಲಿ ಸಾಂಬಮೂರ್ತಿಯವರ ಪ್ರತಿಮೆಯಿದೆ. ಅವರ ಮನೆಯನ್ನು ಇತ್ತೀಚೆಗೆ ಕಂಚಿ ಪೀಠದ ಸಂಸ್ಕೃತ ಶಾಲೆಗೆ ದಾನವಾಗಿ ಕೊಟ್ಟಿದ್ದಾರೆ.
ಮೂರು ದಶಕಗಳ ಕಾಲ ಕನ್ನಡ ಪರದೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು ಎಸ್.ಪಿಬಿಯವರ ಮಧುರ ಕಂಠ
‘ಪಾಡುತಾ ತೀಯಗ’ , ‘ಎದೆತುಂಬಿಹಾಡುವೆನು’ ಟಿವಿ ಕಾರ್ಯಕ್ರಮಗಳಲ್ಲಿ ಸಾವಿರಾರು ಮಂದಿ ಗಾಯಕರು ಬರುವಂತೆ ಮಾಡಿದರು. ಈ.ಟಿ.ವಿಯ ‘ಸ್ವರಾಭಿಷೇಕಂ’ ನಲ್ಲಿ ತಾವು ಮೇಲೆ ತಂದ ಗಾಯಕರಿಂದ ಹಾಡುಗಳನ್ನು ಹಾಡಿಸಿದರು. ಆ ಕಾರ್ಯಕ್ರಮ ಕೇವಲ ಹಾಡುಗಳಿಗೆ ಸಂಬಂಧಿಸಿದ್ದಾಗಿರಲಿಲ್ಲ. ಹಾಡುಹುಟ್ಟಿದ ಸಮಯ , ಅದರ ಚರಿತ್ರೆ , ಅದಕ್ಕೆ ದುಡಿದವರು. ಹೀಗೆ ಎಲ್ಲವನ್ನೂ ಹೇಳುತ್ತಿದ್ದರು.
ಐವತ್ತುವರ್ಷದ ಭಾರತೀಯ ಸಿನಿಮಾ ಸಂಗೀತ ಕ್ಷೇತ್ರದ ಸಾಕ್ಷಿಪ್ರಜ್ಞೆಯಾಗಿದ್ದರು. ಈ ವಿಷಯದಲ್ಲಿ ಏನನ್ನೂ ಬಿಡದೆ ಮಾತನಾಡುವಷ್ಟು ಅಥೆಂಟಿಕ್ ವ್ಯಕ್ತಿ ಅವರಾಗಿದ್ದರು. ಅವರಿಗೆ ಹಣದ ಅಗತ್ಯವೇ ಇರದಿದ್ದರೂ ಬಿಡುವಿಲ್ಲದೆ ದುಡಿಯುತ್ತಿದ್ದರು. ಈ ಕ್ಷೇತ್ರಕ್ಕೆ ಅವರ ಅಗತ್ಯ ಅಷ್ಟಿತ್ತು. ಇನ್ನೂ ಮಿನಿಮಂ ಹತ್ತುವರ್ಷ ಅವರ ಸೇವೆ ಬಾಕಿ ಇತ್ತು. ದೇವರು ಮೋಸಮಾಡಿಬಿಟ್ಟ.
-ಲೇಖನ:
-ಸುದರ್ಶನ್ ರೆಡ್ಡಿ ಡಿ.ಎನ್