ಭೂಗತ ಪಾತಕಿ ಛೋಟಾ ರಾಜನ್ ಗೆ ಹೊಟ್ಟೆ ನೋವು – ಏಮ್ಸ್ ಗೆ ದಾಖಲು
ನವದೆಹಲಿ: ದೆಹಲಿ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಭೂಗತ ಪಾತಕಿ ಛೋಟಾ ರಾಜನ್ ಗೆ ಏಕಾಏಕಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಜೈಲಿನಿಂದ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಗ್ತಿದೆ. ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದಾರೆ. ಮಂಗಳವಾರ ಏಮ್ಸ್ ಗೆ ದಾಖಲಿಸಲಾಗಿದೆ.
ತಿಹಾರ್ ಜೈಲಿನಲ್ಲಿರುವ 61 ವರ್ಷದ ರಾಜನ್ ಗೆ ಎರಡು ತಿಂಗಳ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ಏಪ್ರಿಲ್ 24 ರಂದು ಏಮ್ಸ್ ದಾಖಲಾಗಿದ್ದರು. ಚೇತರಿಸಿಕೊಂಡ ನಂತರ ಮತ್ತೆ ಜೈಲಿಗೆ ಕರೆತರಲಾಗಿತ್ತು. ಈಗ ಹೊಟ್ಟೆ ನೋವಿನಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಛೋಟಾ ರಾಜನ್ ನನ್ನು 2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಗಡೀಪಾರು ಮಾಡಿದ ನಂತರ ಬಂಧನಕ್ಕೊಳಪಡಿಸಿ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
2011ರಲ್ಲಿ ನಡೆದಿದ್ದ ಪತ್ರಕರ್ತ ಜೆ.ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2018ರಲ್ಲಿ ಛೋಟಾ ರಾಜನ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಜಾಮೀನು ನೀಡುವಂತೆ ಛೋಟಾ ರಾಜನ್ ಬಾಂಬೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಆದ್ರೆ ಛೋಟಾ ರಾಜನ್ ಸಾಮಾನ್ಯ ಕ್ರಿಮಿನಲ್ ಅಲ್ಲ. ಅವನ ಕೇಸ್ಗಳನ್ನು ಉಳಿದವರ ಕೇಸ್ಗಳಂತೆ ಪರಿಗಣಿಸಬಾರದು ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸಿಬಿಐ (CBI) ಬಾಂಬೆ ಹೈಕೋರ್ಟ್ಗೆ ಬುಧವಾರ ಅರ್ಜಿ ಸಲ್ಲಿಸಿದೆ.
ಛೋಟಾ ರಾಜನ್ ವಿರುದ್ಧ ವಿಚಾರಣೆ ಮಾಡಬೇಕಾದ ಹಲವು ಪ್ರಕರಣಗಳು ಬಾಕಿ ಇವೆ. ಅವನು ರಾಷ್ಟ್ರದ ಪಾಲಿಗೆ ಝಡ್ ಪ್ಲಸ್ ಸೆಕ್ಯೂರಿಟಿ ಬೆದರಿಕೆ ಎಂದು ವಿಶೇಷ ಸಾರ್ವಜನಿಕ ಪ್ರಾಸಿಕ್ಯೂಟರ್ ಪರ್ದೀಪ್ ಘಾರಟ್, ಬಾಂಬೆ ಹೈಕೋರ್ಟ್ನ ಅನುಜಾ ಪ್ರಭುದೇಸಾಯ್ ನೇತೃತ್ವದ ಪೀಠಕ್ಕೆ ತಿಳಿಸಿದ್ದಾರೆ.
ಮೇಕೆ ಮೇಲೆ ಸಾಮೂಹಿಕ ಅತ್ಯಾಚಾರ , ಕೊಲೆ – ದೌರ್ಜನ್ಯಕ್ಕೆ ಮಹಿಳೆಯರ ಬಟ್ಟೆಯೇ ಕಾರಣ ಎಂದಿದ್ದ ಇಮ್ರಾನ್ ಏನ್ ಹೇಳ್ತಾರೆ..?