ಬೆಂಗಳೂರು: ತೀವ್ರ ಉಸಿರಾಟದಿಂದ ಬಳಲುತ್ತಿದ್ದ 1 ತಿಂಗಳ ಹಸುಗೂಸಿನೊಂದಿಗೆ 10 ಆಸ್ಪತ್ರೆಗಳನ್ನು ಅಲೆದರೂ ಚಿಕಿತ್ಸೆ ಸಿಗದೆ ಮೃತಪಟ್ಟ ಮಗುವಿನ ತಂದೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದ ಮುಂದೆ ಧರಣಿ ಕುಳಿತ ಮಗುವಿನ ತಂದೆ ವೆಂಕಟೇಶ್, ತನಗಾದ ಅನ್ಯಾಯ ಬೇರೆ ಯಾರಿಗೂ ಆಗುವುದು ಬೇಡ. ರೋಗಿಗಳಿಗೆ ಚಿಕಿತ್ಸೆ ನೀಡದೇ ಸತಾಯಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇದೇ ಜುಲೈ 11ರಂದು ರಾಜಾಜಿನಗರದ ಮಂಜುನಾಥ ನಗರದ ನಿವಾಸಿ ವೆಂಕಟೇಶ್ ಅವರ ಒಂದು ತಿಂಗಳ ಹಸುಗೂಸು ಮೃತಪಟ್ಟಿತ್ತು. ಉಸಿರಾಟದ ಸಮಸ್ಯೆಯಿಂದ ಮಗು ಬಳಲುತ್ತಿದ್ದಾಗ 10 ಖಾಸಗಿ ಆಸ್ಪತ್ರೆಗಳಿಗೆ ವೆಂಕಟೇಶ್ ಇಡೀ ರಾತ್ರಿ ಅಲೆದಿದ್ದರು. ಆಂಬ್ಯುಲೆನ್ಸ್ ಇಲ್ಲದೆ ಬೈಕ್‍ನಲ್ಲೇ 200 ಕಿ.ಮೀ ಸುತ್ತಾಡಿದ್ದ ವೆಂಕಟೇಶ್‍ರ ಮಗು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿತ್ತು.
ತಮಗಾದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ನನ್ನ ಮಗು ಸಾವನ್ನಪ್ಪಿ ನಾಲ್ಕು ದಿನಗಳು ಕಳೆದಿವೆ. ಈ ರೀತಿ ಆಗದಂತೆ ಅಧಿಕಾರಿಗಳೂ ಹೇಳಿದ್ದರು. ಆದರೆ, ಇಂತಹ ಪ್ರಕರಣಗಳು ಪುನರಾವರ್ತನೆಯಾಗುತ್ತಿವೆ. ಹೀಗಾಗಿ ತಮಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಬಿಎಸ್‍ವೈ ಮನೆ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಲು ಮುಂದಾದರು.
ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಗೊಳ್ಳುವವರೆಗೆ 10 ದಿನ ಅಲ್ಲ, ತಿಂಗಳು ಬೇಕಾದರೂ ಕಾಯುತ್ತೇನೆ. ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎªಂದು ವೆಂಕಟೇಶ್ ಪಟ್ಟುಹಿಡಿದಿದ್ದಾರೆ.
ನಗರದಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಪೊಲೀಸರು ಎಷ್ಟೇ ಮನವೊಲಿಕೆಗೆ ಯತ್ನಿಸಿದರೂ ಪ್ರತಿಭಟನೆ ಕೈಬಿಡದ ಹಿನ್ನೆಲೆಯಲ್ಲಿ ವೆಂಕಟೇಶ್‍ರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.








