ವಿಶ್ವವಿದ್ಯಾಲಯಗಳ ಸೆಮಿಸ್ಟರ್ ಪರೀಕ್ಷೆ ಒಂದು ತಿಂಗಳ ಕಾಲ ಮುಂದೂಡಿಕೆ Saaksha Tv
ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಗೆ ಒಳಪಡುವ ಎಲ್ಲಾ ವಿಶ್ವವಿದ್ಯಾಲಯಗಳ ಸೆಮಿಸ್ಟರ್ ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ.
ಕೊರೊನಾ ಮತ್ತು ಓಮಿಕ್ರಾನ್ ಸಾಂಕ್ರಾಮಿಕ ಪ್ರಕರಣಗಳ ಸೋಂಕು ಹೆಚ್ಚಳ ಹಾಗೂ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಪಾಠ-ಪ್ರವಚನಗಳು ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಅವರು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಸಚಿವರುಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಕೆಲವು ವಿಶ್ವವಿದ್ಯಾಲಯಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದವು. ಆದರೆ, ಕೊರೊನಾ ಮತ್ತು ಓಮಿಕ್ರಾನ್ ಸಾಂಕ್ರಾಮಿಕ ಪ್ರಕರಣಗಳ ಸೋಂಕು ಹೆಚ್ಚಳ ಹಾಗೂ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಪಾಠ-ಪ್ರವಚನಗಳು ಮುಗಿದಿಲ್ಲ. ಈ ಕಾರಣಗಳನ್ನು ನೀಡಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಪರೀಕ್ಷೆಯನ್ನು ಮುಂದೂಡುವಂತೆ ಕೋರಿದ್ದರು.
ಹೀಗಾಗಿ, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನಿಸಿ, ಪರೀಕ್ಷೆಯನ್ನು ಮುಂದೂಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ’ಎಂದು ತಿಳಿಸಿದ್ದಾರೆ.









