ಅನ್‌ಲಾಕ್ 3 – ದೆಹಲಿಯಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ
ಹೊಸದಿಲ್ಲಿ, ಅಗಸ್ಟ್21: ದೆಹಲಿ ಸರ್ಕಾರವು ಐದು ತಿಂಗಳ ಅವಧಿಯ ನಂತರ ರಾಷ್ಟ್ರ ರಾಜಧಾನಿಯಲ್ಲಿನ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವಿಸಲು ಅವಕಾಶ ನೀಡಿದೆ. ಮದ್ಯ ಮಾರಾಟ ಪರವಾನಗಿ ಹೊಂದಿರುವ ಘಟಕಗಳಿಗೆ ಮಾತ್ರ ಈ ಅನುಮತಿಯನ್ನು ನೀಡಲಾಗಿದೆ.

ಆದಾಗ್ಯೂ, ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅನ್‌ಲಾಕ್ 3 ಮಾರ್ಗಸೂಚಿಗಳ ಪ್ರಕಾರ, ಪ್ರಸ್ತುತ ಬಾರ್‌ಗಳನ್ನು ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ. ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಮದ್ಯ ಸೇವೆ ಮಾಡಲು ಅನುಮತಿಯನ್ನು ಹಿಂಪಡೆಯಲಾಗಿದೆ.
ಜೂನ್ 12 ರಂದು ದೆಹಲಿ ಸರ್ಕಾರವು ರೆಸ್ಟ್ರೋ-ಬಾರ್, ಹೋಟೆಲ್‌ಗಳು ಮತ್ತು ಕ್ಲಬ್‌ಗಳಿಗೆ, ಬಿಯರ್ ದಾಸ್ತಾನು ಅವಧಿ ಮೀರುತ್ತಿದ್ದ ಮದ್ಯದಂಗಡಿಗಳಿಗೆ ಮದ್ಯ ಮಾರಾಟ ಮಾಡಲು ಅನುಮತಿ ನೀಡಿತ್ತು. ಇದು ಅವರ ನಷ್ಟವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ.
ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 950 ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ರೆಸ್ಟ್ರೊ-ಬಾರ್‌ಗಳಿವೆ, ಅವುಗಳು ಅಬಕಾರಿ ಪರವಾನಗಿ ಹೊಂದಿವೆ. ಆದಾಗ್ಯೂ, ರಾಷ್ಟ್ರವ್ಯಾಪಿ ಮೊದಲ ಲಾಕ್‌ಡೌನ್ ಘೋಷಣೆಯಾದ ನಂತರ ಮಾರ್ಚ್ 25 ರಿಂದ ಅವುಗಳನ್ನು ತೆರೆಯಲು ಅನುಮತಿಸಲಾಗಿಲ್ಲ.

ಈ ಮೊದಲು ಮೇ 4 ರಂದು ದೆಹಲಿ ಸರ್ಕಾರವು ಸ್ವತಂತ್ರವಾಗಿ ನಡೆಸುವ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿತ್ತು. ಮೇ 22 ರ ಹೊತ್ತಿಗೆ, ಮಾರುಕಟ್ಟೆಗಳಲ್ಲಿ ಸೇರಿದಂತೆ ಖಾಸಗಿ ಮದ್ಯದಂಗಡಿಗಳನ್ನು ಸಹ ನಿರ್ವಹಿಸಲು ಅನುಮತಿ ನೀಡಲಾಯಿತು.
ದೆಹಲಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ, ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ, ದೆಹಲಿ ರಾಜ್ಯ ನಾಗರಿಕ ಸರಬರಾಜು ನಿಗಮ ಮತ್ತು ದೆಹಲಿ ಗ್ರಾಹಕರ ಸಹಕಾರಿ ಸಗಟು ಅಂಗಡಿ- ನಾಲ್ಕು ಸರ್ಕಾರಿ ಸಂಸ್ಥೆಗಳು ನಗರದಲ್ಲಿ ಸರ್ಕಾರಿ ಅಂಗಡಿ ಗಳನ್ನು ನಿರ್ವಹಿಸುತ್ತವೆ.








