Unnao murder – ಸಮಾಜವಾದಿ ಪಕ್ಷದ ನಾಯಕನ ಹೊಲದಲ್ಲಿ ಯುವತಿಯ ಮೃತದೇಹ ಪತ್ತೆ..
ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ನಡೆಯುತ್ತಿರುವ ಹೊತ್ತಿನಲ್ಲಿ ಸಮಾಜವಾದಿ ಪಕ್ಷದ ಸರ್ಕಾರದ ಮಾಜಿ ಸಚಿವರೊಬ್ಬರ ಜಮೀನಿನಲ್ಲಿ 22 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಅತ್ಯಾಚಾರಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಉನ್ನಾವೋದಲ್ಲಿ ಇದೀಗ ಮತ್ತೆ ಅತ್ಯಾಚಾರದ ಪ್ರಕರಣ ಕೇಳಿ ಬರುತ್ತಿದೆ.
ಉನ್ನಾವೋದ ಸದರ್ ಕೊಟ್ವಾಲಿ ಪ್ರದೇಶದ ಕಾನ್ಶಿರಾಮ್ ದಲಿತ ಯುವತಿ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದರು. ಅವಳ ತಾಯಿ ಅವಳನ್ನು ಎಲ್ಲೆಡೆ ಹುಡುಕಿದರೂ ಆಕೆಯ ಪತ್ತೆಯಾಗಿರಲಿಲ್ಲ. ಡಿಸೆಂಬರ್ 8ರಂದು ಕಾಣೆಯಾದ ದೂರನ್ನು ದಾಖಲಿಸಲಾಗಿತ್ತಾದರೂ, ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯುವತಿಯ ತಾಯಿ ಜನವರಿ 24ರಂದು ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರ ಕಾರಿನ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ನಂತರ ಎಚ್ಚೆತ್ತ ಪೊಲೀಸರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಡಳಿತದಲ್ಲಿ ಸಚಿವರಾಗಿದ್ದ ರಾಜೋಲ್ ಸಿಂಗ್ನನ್ನು ಬಂಧಿಸಿದ್ದರು. ಇದೀಗ ಅವರ ಜಮೀನಿನಲ್ಲೇ ಆಕೆಯ ಮೃತದೇಹ ಪತ್ತೆಯಾಗಿದೆ.
ಮಾಜಿ ರಾಜ್ಯ ಸಚಿವ ರಾಜೋಲ್ ಸಿಂಗ್ ಅವರ ಒಡೆತನದ ಆಶ್ರಮದ ಬಳಿ 22 ವರ್ಷದ ಮಹಿಳೆಯ ಶವವನ್ನು ಗುರುವಾರ ಪತ್ತೆ ಮಾಡಲಾಗಿದೆ. ಕೊಳೆತ ಶವವನ್ನು ಕಂಬಳಿಯಲ್ಲಿ ಸುತ್ತಿ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನ್ನ ಮಗಳನ್ನು ಮಾಜಿ ಸಚಿವರ ಮಗ ರಾಜೋಲ್ ಸಿಂಗ್ ಕಿಡ್ನಾಪ್ ಮಾಡಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದಳು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಮತ್ತು ಬಿಎಸ್ಪಿ ಟೀಕಾ ಪ್ರಹಾರ ನಡೆಸಿವೆ. ಮರಣೋತ್ತರ ಪರೀಕ್ಷೆಯಲ್ಲಿ ಆ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.








