ಮೇ 24ರ ವರೆಗೆ ಸುಮಾರು 1,100 ಪ್ಯಾಸೆಂಜರ್ ರೈಲುಗಳು ರದ್ದು
ನವದೆಹಲಿ: ವಿದ್ಯುತ್ ಬಿಕ್ಕಟ್ಟನ್ನು ತಗ್ಗಿಸಲು, ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಿಗೆ, ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ಇಲಾಖೆ ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ.
ಈ ತಿಂಗಳು ದೇಶಾದ್ಯಂತ ವಿದ್ಯುತ್ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದ್ದು, ಆದ್ದರಿಂದ ವಿವಿಧ ರಾಜ್ಯಗಳ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಾಧ್ಯವಾದಷ್ಟು ಕಲ್ಲಿದ್ದಲು ಸಾಗಿಸಲು ಸರ್ಕಾರ ಮುಂದಾಗಿದೆ.
ಹೀಗಾಗಿ ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗಲು ಮೇ 24ರ ವರೆಗೆ ಸುಮಾರು 1,100 ರೈಲುಗಳು ರದ್ದಾಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಏಪ್ರಿಲ್ 19ರಂದು ದೇಶಾದ್ಯಂತ ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗುವಂತೆ ಸುಮಾರು 240 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸುವುದಾಗಿ ರೈಲ್ವೆ ಇಲಾಖೆ ಘೋಷಿಸಿತ್ತು. ಇಲ್ಲಿ ವರೆಗೆ ಎಕ್ಸ್‌ಪ್ರೆಸ್ ರೈಲುಗಳ ಸುಮಾರು 500 ಟ್ರಿಪ್‌ಗಳನ್ನು ಹಾಗೂ ಪ್ಯಾಸೆಂಜರ್ ರೈಲುಗಳ 580 ಟ್ರಿಪ್‌ಗಳನ್ನು ರದ್ದುಗೊಳಿಸಿಲಾಗಿದೆ.
ದೇಶದ ಕೆಲವು ಭಾಗಗಳಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರು ಮುಷ್ಕರವನ್ನೂ ನಡೆಸುತ್ತಿದ್ದು, ಇದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ದೇಶದಲ್ಲಿರುವ 173 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಪೈಕಿ 108 ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ತೀವ್ರವಾಗಿ ಕಡಿಮೆಯಾಗಿದೆ.








