ಹೊಸದಿಲ್ಲಿ, ಜೂನ್ 7 : ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ಒ) ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಜನರು ಹೇಗೆ ಮಾಸ್ಕ್ ಗಳನ್ನು ಧರಿಸಬೇಕು ಎನ್ನುವ ಬಗ್ಗೆ ಮಾರ್ಗಸೂಚಿಯಲ್ಲಿ ಬದಲಾವಣೆಗಳನ್ನು ಮಾಡಿ ನವೀಕರಿಸಿದೆ.
ಡಬ್ಲ್ಯುಎಚ್‌ಒ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಲೇ ಇರುವ ಹಿನ್ನಲೆಯಲ್ಲಿ ಮಾಸ್ಕ್ ಅನ್ನು ಯಾರು ಧರಿಸಬೇಕು, ಯಾವಾಗ ಧರಿಸಬೇಕು ಮತ್ತು ಈ ಮಾಸ್ಕ್ ಅನ್ನು ಯಾರು ತಯಾರಿಸಬೇಕು ಎಂಬ ಬಗ್ಗೆ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದೆ.
ಕೊರೋನಾ ಸೋಂಕು ವ್ಯಾಪಕವಾಗಿರುವ ಪ್ರದೇಶಗಳ ಸಾರ್ವಜನಿಕ ಸಾರಿಗೆ, ಅಂಗಡಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸರ್ಕಾರಗಳು ಸಾರ್ವಜನಿಕರಿಗೆ ಸೂಚಿಸಬೇಕು ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಆಡ್ನೋಮ್ ಸಲಹೆ ನೀಡಿದ್ದಾರೆ.
60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾದ ಹಿರಿಯ ನಾಗರಿಕರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಜನರಿಂದ ದೈಹಿಕವಾಗಿ ಅಂತರ ಕಾಪಾಡಿಕೊಳ್ಳಲು ಕಷ್ಟವಾದ ಸಂದರ್ಭದಲ್ಲಿ ವೈದ್ಯಕೀಯ ಮುಖವಾಡಗಳನ್ನು ಧರಿಸಬೇಕು ಎಂದವರು ಸಲಹೆ ನೀಡಿದ್ದಾರೆ.
ವೈದ್ಯಕೀಯೇತರ ಫ್ಯಾಬ್ರಿಕ್ ಮುಖವಾಡಗಳ ವಿನ್ಯಾಸಕ್ಕೆ ಸಂಬಂಧಿಸಿದಂತೆ ಡಬ್ಲ್ಯುಎಚ್‌ಒ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಮುಖವಾಡವು ಕನಿಷ್ಠ ಮೂರು ಪದರಗಳನ್ನು ಹೊಂದಿರಬೇಕು ಎಂದು ಸೂಚಿಸಿದೆ.
ಆದಾಗ್ಯೂ ಮುಖವಾಡಗಳನ್ನು ಧರಿಸುವುದು ಕೊರೊನಾ ವೈರಸ್ ಅನ್ನು ದೂರವಿಡುವ ಪರಿಣಾಮಕಾರಿ ವಿಧಾನವೆಂದು ಭಾವಿಸುವುದಾಗಲಿ ಅಥವಾ ಮಾಸ್ಕ್ ಧರಿಸುವುದರಿಂದ ನಾವು ಸಂಪೂರ್ಣವಾಗಿ ಸುರಕ್ಷಿತರು ಎಂದು ಭಾವಿಸುವುದಾಗಲಿ ಸಲ್ಲದು ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥರು ಎಚ್ಚರಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈ ನೈರ್ಮಲ್ಯಕ್ಕೆ ಪರ್ಯಾಯವಾಗಿ ಮುಖವಾಡ ಧರಿಸುವುದನ್ನು ಪರಿಗಣಿಸಲು ಸಾಧ್ಯವಿಲ್ಲ.
ಮಾಸ್ಕ್ ಧರಿಸುವ ಮೂಲಕ ಕೊರೊನಾ ವೈರಸ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಕೊರೊನಾ ಪ್ರಕರಣಗಳನ್ನು ಹುಡುಕಿ, ಅವರನ್ನು ಪ್ರತ್ಯೇಕವಾಗಿರಿಸಿ, ಅವರ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ ಮತ್ತು ಪ್ರತಿ ಸಂಪರ್ಕವನ್ನು ಕಂಡು ಹಿಡಿಯಿರಿ ಮತ್ತು ಅವರನ್ನು ನಿರ್ಬಂಧಿಸಿ. ಹೀಗೆ ಮಾಡುವುದರಿಂದ ಮಾತ್ರ ಕೊರೊನಾ ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಟದಲ್ಲಿ ಜಯಗಳಿಸಲು ಸಾಧ್ಯ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಆಡ್ನೋಮ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.