ಉಪ್ಪಿನಂಗಡಿ – ನೇತ್ರಾವತಿ ಕುಮಾರಧಾರ ಸಂಗಮಕ್ಕೆ ಕ್ಷಣಗಣನೆ
ಉಪ್ಪಿನಂಗಡಿ, ಅಗಸ್ಟ್ 8: ಉಪ್ಪಿನಂಗಡಿಯಲ್ಲಿ ನೇತ್ರಾವತಿ ಕುಮಾರ ಧಾರ ಸಂಗಮಕ್ಕೆ ಕ್ಷಣಗಣನೆ. ಭಾರೀ ಮಳೆಗೆ ನೇತ್ರಾವತಿ- ಕುಮಾರಧಾರಾ ನದಿಗಳು ಉಕ್ಕೇರಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶ ಗಳು ಜಲಾವೃತಗೊಂಡಿವೆ. ನೀರಿನ ಹೆಚ್ಚಳದಿಂದಾಗಿ ಈಗಾಗಲೇ ಉಪ್ಪಿನಂಗಡಿ, ನಟ್ಟಿಬೈಲು ಮೊದಲಾದ ಪ್ರದೇಶಗಳ ಕೃಷಿಭೂಮಿಗೆ ಪ್ರವಾಹದ ನೀರು ನುಗ್ಗಿದೆ.

ಇಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿ ಮುಂದಕ್ಕೆ ಬಂದರೆ ಮತ್ತು ದೇವಾಲಯದ ಇನ್ನೊಂದು ದಿಕ್ಕಿನಿಂದ ಕುಮಾರಧಾರಾ ನದಿ ನೀರು ಕೂಡ ಅಲ್ಲಿಗೆ ಬಂದು ಕೂಡಿಕೊಂಡರೆ ಎರಡು ನದಿಗಳ ನಡುವೆ ಸಂಗಮವಾಗುತ್ತದೆ.
ಘಟ್ಟ ಪ್ರದೇಶಗಳಲ್ಲಿ ಕೂಡ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಯಾಪದ ಕ್ಷೇತ್ರದ ಈ ಎರಡೂ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸಂಗಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.







