ನವದೆಹಲಿ: ಪದೇ ಪದೇ ಭಾರತದೊಂದಿಗೆ ಗಡಿತಂಟೆ ಕೆಣಕಿ 20 ಯೋಧರ ಹತ್ಯೆ ಮಾಡಿದ್ದ ಚೀನಾದ ಟಿಕ್‍ಟಾಕ್ ಸೇರಿದಂತೆ 58 ಸೋಷಿಯಲ್ ಮೀಡಿಯಾ ಆಪ್‍ಗಳನ್ನು ಬ್ಯಾನ್ ಮಾಡಿ ಭಾರತ ಸಖತ್ತಾಗೆ ಟಕ್ಕರ್ ಕೊಟ್ಟಿದೆ.

ಅಮೆರಿಕಾ ಮತ್ತು ಆಸ್ಟ್ರೇಲಿಯಾದಲ್ಲೂ ಚೀನಾ ದೇಶಗಳ ಆಪ್‍ಗಳ ನಿಷೇಧಕ್ಕೆ ಚಿಂತನೆ ನಡೆದಿದೆ. ಚೀನಾ ಜತೆ ವಾಣಿಜ್ಯ ಸಂಘರ್ಷದಲ್ಲಿ ನಿರತವಾಗಿರುವ ಅಮೆರಿಕಾ, ಚೀನಾ ಆಪ್‍ಗಳನ್ನು ಬ್ಯಾನ್ ಮಾಡಲು ಚಿಂತನೆ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ಚೀನಾಗೆ ಭಾರಿ ಮುಖಭಂಗವಾಗಿದೆ.
ಚೀನಾ ಆಪ್‍ಗಳನ್ನು ಬ್ಯಾನ್ ಮಾಡುವ ಪ್ರಸ್ತಾಪ ನಮ್ಮ ಮುಂದಿದೆ. ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಒಂದಂತೂ ನಿಜ, ಈ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೋಂಪಿಯೋ ಹೇಳಿದ್ದಾರೆ.
ಚೀನಾದ ಕಮ್ಯುನಿಷ್ಟ್ ಸರ್ಕಾರ ಆಪ್‍ಗಳ ಮೂಲಕ ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ರಹಸ್ಯಗಳ ಬೇಹುಗಾರಿಕೆ ಮಾಡುತ್ತಿದೆ ಎಂಬ ಆರೋಪಗಳಿವೆ. ಟಿಕ್‍ಟಾಕ್‍ನ ಬಳಕೆದಾರರ ಡೇಟಾವನ್ನು ಚೀನಾ ಸರ್ಕಾರವೇ ಕಂಟ್ರೋಲ್ ಮಾಡುತ್ತಿರುವ ಬಗ್ಗೆ ರಾಷ್ಟ್ರೀಯ ಭದ್ರತಾ ಮಂಡಳಿ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಈ ಬಗ್ಗೆ ಒಂದು ಕಠಿಣ ನಿರ್ಧಾರಕ್ಕೆ ಬರಬೇಕಿದೆ ಎಂದು ಪೋಂಪಿಯೋ ತಿಳಿಸಿದ್ದಾರೆ.

ಅಮೆರಿಕದ ಕೋಪಕ್ಕೆ ಕೊರೊನಾ ವೈರಸ್ ಕೂಡ ಒಂದು. ವಿಶ್ವಕ್ಕೆಲ್ಲ ಕೊರೊನಾ ವೈರಸ್ ಹರಡಿ ನೆಮ್ಮದಿಯಿಂದ ಇರುವ ಚೀನಾ, ನೆರೆಯ ರಾಷ್ಟ್ರಗಳಾದ ಭಾರತ, ನೇಪಾಳ ಸೇರಿದಂತೆ ಹಲವು ರಾಷ್ಟ್ರಗಳ ಜತೆ ಗಡಿ ತಂಟೆ ಮಾಡುತ್ತಿದೆ. ಇದೇ ಸೂಕ್ತ ಸಮಯ ಎಂದು ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳು ಅಮೆರಕ ಹವಣಿಸುತ್ತಿದೆ ಎನ್ನಲಾಗಿದೆ.
ಭಾರತದ ಬೆನ್ನಲ್ಲೇ ಆಸ್ಟ್ರೇಲಿಯಾ ಕೂಡ ಚೀನಾ ಆಪ್‍ಗಳನ್ನು ಬ್ಯಾನ್ ಮಾಡಲು ಚಿಂತನೆ ನಡೆಸಿರುವುದು ಟ್ರ್ಯಾಗನ್ ರಾಷ್ಟ್ರಕ್ಕೆ ದೊಡ್ಡ ಹೊಡೆತ ಬೀಳುವುದಂತೂ ಪಕ್ಕಾ ಆಗಿದೆ.








