ಅಮೆರಿಕದ ಚುನಾವಣೆ – ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಭಾರತ ಮೂಲದ ನಿಕ್ಕಿಹ್ಯಾಲೆ ?
ವಾಷಿಂಗ್ಟನ್, ಅಗಸ್ಟ್ 28: ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚಿನ ಕುತೂಹಲ ಸೃಷ್ಟಿಸಿದೆ. ಇದಕ್ಕೆ ಕಾರಣ ಭಾರತ ಮೂಲದ ಅಮೆರಿಕನ್ನರು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು. ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆ ಪ್ರಚಾರದ ಬಿರುಸಿನಲ್ಲಿಯೇ ಸಾಗಿದ್ದು, ಭಾರತೀಯ ಮೂಲದ ಅಮೆರಿಕನ್ ಮತದಾರರನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಡೆಮೊಕ್ರಾಟಿಕ್ ಪಕ್ಷವು ಕ್ಯಾಲಿಫೋರ್ನಿಯಾ ಸಂಸದೆ ಭಾರತ ಮೂಲದ ಕಮಲಾ ಹ್ಯಾರಿಸ್ರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಈಗಾಗಲೇ ಘೋಷಿಸಿದ್ದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಅಭಿಯಾನದಲ್ಲಿ ಪ್ರಧಾನಿ ಮೋದಿ ಜೊತೆಗಿನ ವಿಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಇದೀಗ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ವಿಶ್ವಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಕ್ಕಿ ಹ್ಯಾಲೆ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿನ ಚರ್ಚೆಯಲ್ಲಿ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಸಮರ್ಥಿಸಿ ಭಾಷಣ ಮಾಡಿದ್ದು, ನಾಲ್ಕು ವರ್ಷ ಕಳೆದು ನಡೆಯಲಿರುವ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸೌತ್ ಕ್ಯಾರೋಲಿನಾದ ಮಾಜಿ ರಾಯಭಾರಿಯೂ ಆಗಿರುವ ನಿಕ್ಕಿ ಹ್ಯಾಲಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಡೆಮೊಕ್ರಾಟಿಕ್ ಪಕ್ಷದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಂತೆ ನಿಕ್ಕಿ ಹ್ಯಾಲೆ ಕೂಡ ಭಾರತೀಯ ಮೂಲದವರು. ನಿಕ್ಕಿ ಹ್ಯಾಲೆ ಕೂಡ ಸಮರ್ಥ ಮತ್ತು ನಿಖರವಾಗಿ ತಮ್ಮ ಮಾತುಗಳನ್ನು ಮುಂದಿಡುತ್ತಿದ್ದು, 2024 ಅಥವಾ 20208ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಭಾವ್ಯ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೂಡ ಹಲವು ಉನ್ನತ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.