ಪಾಕಿಸ್ತಾನದ ವಿಮಾನಗಳಿಗೆ ನಿರ್ಬಂಧ ಹೇರಿದ ಅಮೆರಿಕ
ವಾಷಿಂಗ್ಟನ್, ಜುಲೈ 10: ಪಾಕಿಸ್ತಾನದಲ್ಲಿ ನಕಲಿ ಪೈಲಟ್ ಹಗರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ ಸಾರಿಗೆ ಇಲಾಖೆ ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಯಾನದ ವಿಶೇಷ ಅನುಮತಿಯನ್ನು ಅಮಾನತುಗೊಳಿಸಿದೆ.
ಪ್ರಾಧಿಕಾರವು ತನ್ನ ಹೇಳಿಕೆಯಲ್ಲಿ ಪಾಕಿಸ್ತಾನದ ವಿಮಾನಗಳಿಗೆ ಯುನೈಟೆಡ್ ಸ್ಟೇಟ್ಸ್ ಗೆ ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ ಎಂದು ಹೇಳಿದೆ.
ಪಿಐಎ ನಿರ್ವಹಿಸುವ ಎಲ್ಲಾ ರೀತಿಯ ವಿಮಾನಗಳಿಗೂ ನಿಷೇಧ ಹೇರಲಾಗಿದೆ ಎಂದು ಯುಎಸ್ ಪ್ರಾಧಿಕಾರ ಹೇಳಿದೆ.
ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೈಲಟ್ ಗಳು ಸುಳ್ಳು ದಾಖಲೆ ಸೃಷ್ಟಿಸಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಪ್ರವೇಶಿಸುವ ಪಾಕಿಸ್ತಾನದ ಎಲ್ಲಾ ವಿಮಾನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಪಿಐಎ ವಕ್ತಾರರು ನಿಷೇಧವನ್ನು ದೃಢಪಡಿಸಿದ್ದು, ಈ ನಿಟ್ಟಿನಲ್ಲಿ ನಮಗೆ ಯುಎಸ್ ನಿಂದ ಇಮೇಲ್ ಬಂದಿದೆ ಎಂದು ಹೇಳಿದ್ದಾರೆ.
ನಾವು ಅಮೆರಿಕದ ಕಳವಳಗಳನ್ನು ಪರಿಹರಿಸುತ್ತೇವೆ ಎಂದು ಅವರು ಹೇಳಿದ್ದು, ಸೂಕ್ತ ಕ್ರಮಗಳ ಮೂಲಕ ಪೈಲಟ್‌ಗಳ ಪರವಾನಗಿಗಳ ಪರವಾನಗಿಗಳ ವಿಷಯವನ್ನು ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.
ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (ಇಎಎಸ್ಎ) ರಾಷ್ಟ್ರೀಯ ವಾಹಕದ ಪರವಾನಗಿಯನ್ನು ಆರು ತಿಂಗಳವರೆಗೆ ಅಮಾನತುಗೊಳಿಸಿದ ಕೆಲವೇ ದಿನಗಳ ನಂತರ, ಯುಕೆ ತನ್ನ ಮೂರು ವಿಮಾನ ನಿಲ್ದಾಣಗಳಿಂದ ಪಿಐಎ ವಿಮಾನಗಳನ್ನು ನಿಷೇಧಿಸಿದೆ ಮತ್ತು ವಿಯೆಟ್ನಾಂ ದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪಾಕಿಸ್ತಾನಿ ಪೈಲಟ್‌ಗಳನ್ನು ಹಿಂದೆ ಕಳುಹಿಸಿದೆ.
ಅಂತೆಯೇ, ಮಲೇಷ್ಯಾದ ವಾಯುಯಾನ ನಿಯಂತ್ರಣ ಪ್ರಾಧಿಕಾರವು ಪಾಕಿಸ್ತಾನದ ಪರವಾನಗಿಗಳನ್ನು ಹೊಂದಿರುವ ಮತ್ತು ಅದರ ದೇಶೀಯ ವಿಮಾನಯಾನ ಸಂಸ್ಥೆಗಳಿಂದ ನೇಮಕಗೊಂಡ ಪೈಲಟ್‌ಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದಾಗಿ ಘೋಷಿಸಿದೆ








