ದಕ್ಷಿಣ ಚೀನಾ ಸಮುದ್ರದಲ್ಲಿ ತಾಲೀಮು ನಡೆಸಿ ಚೀನಾಕ್ಕೆ ಸವಾಲು ಎಸೆದ ಅಮೆರಿಕದ ಪರಮಾಣು ನೌಕೆಗಳು
ಹೊಸದಿಲ್ಲಿ, ಜುಲೈ 6: ಭಾರತವನ್ನು ಬೆಂಬಲಿಸುತ್ತಿರುವ ಅಮೆರಿಕವು ದಕ್ಷಿಣ ಚೀನಾ ಸಮುದ್ರದಲ್ಲಿ ತಾಲೀಮು ನಡೆಸುವ ಮೂಲಕ ಚೀನಾಗೆ ಸವಾಲು ಎಸೆದಿದೆ. ಭಾರತ ಹಾಗೂ ಚೀನಾದ ನಡುವಿನ ಗಡಿ ಸಂಘರ್ಷದ ಬಳಿಕ ಭಾರತಕ್ಕೆ ಬೆಂಬಲ ನೀಡುತ್ತಿರುವ ಅಮೆರಿಕವು ದಕ್ಷಿಣ ಚೀನಾ ಸಮುದ್ರಕ್ಕೆ ಮತ್ತೆ ಎರಡು ಪರಮಾಣು ಶಸ್ತ್ರಾಸ್ತ್ರಸಜ್ಜಿತ ಸಮರ ನೌಕೆಗಳಾದ ಯು.ಎಸ್.ಎಸ್. ರೊನಾಲ್ಡ್ ರೇಗನ್, ಯು.ಎಸ್.ಎಸ್. ನಿಮಿಟ್ಜ್ ಗಳನ್ನು ಕಳುಹಿಸಿ ಕೊಟ್ಟಿದ್ದು, ಇವು ದಕ್ಷಿಣ ಚೀನಾ ಸಮುದ್ರದಲ್ಲಿ ಸಮರಾಭ್ಯಾಸ ನಡೆಸಿದೆ

ಅಮೆರಿಕ ಸೇನೆಯ ಉನ್ನತಾಧಿಕಾರಿ ಜಾರ್ಜ್ ಎಂ.ವಿಕಾಫ್ ಅವರು ಭಾರತ ಸೇರಿದಂತೆ ಅಗ್ನೇಯ ಏಷ್ಯಾದ ಮಿತ್ರ ರಾಷ್ಟ್ರಗಳಿಗೆ ಬೆಂಬಲ ನೀಡುವುದು ಈ ತಾಲೀಮಿನ ಉದ್ದೇಶ ಎಂದು ಹೇಳಿದ್ದಾರೆ. ಈ ಎರಡೂ ನೌಕೆಗಳು ಇಂಡೋ-ಪೆಸಿಫಿಕ್ ಪ್ರದೇಶವನ್ನು ಬೆಂಬಲಿಸುವ ನಿಟ್ಟಿನಲ್ಲಿ ನೌಕೆ ಸೇನೆ ತಾಲೀಮು ಹಾಗೂ ವಿವಿಧ ಚಟುವಟಿಕೆಗಳನ್ನು ಚೀನಾ ಸಮುದ್ರದಲ್ಲಿ ನಡೆಸಿರುವುದಾಗಿ ಅಮೆರಿಕ ಮೂಲಗಳು ತಿಳಿಸಿವೆ.
ಯುಎಸ್‌ಎಸ್ ನಿಮಿಟ್ಜ್ (ಸಿವಿಎನ್ 68) ಮತ್ತು ಯುಎಸ್‌ಎಸ್ ರೊನಾಲ್ಡ್ ರೇಗನ್ (ಸಿವಿಎನ್ 76) ಎಂಬ ಈ ಎರಡು ಪರಮಾಣು ಶಸ್ತ್ರಾಸ್ತ್ರ ಸಜ್ಜಿತ ಸಮರ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಕ್ಯಾರಿಯರ್ ಕಾರ್ಯಾಚರಣೆ ಹಾಗೂ ವಿವಿಧ ಚಟುವಟಿಕೆಗಳನ್ನು ನಡೆಸಿ ಚೀನಾಗೆ ಸೆಡ್ಡು ಹೊಡೆದಿದ್ದು, ಅಮೆರಿಕದ ಈ ನಡೆಯನ್ನು ಚೀನಾ ವಿರೋಧಿಸಿದೆ. ಅಗ್ನೇಯ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗಲು ಅಮೆರಿಕ ಕಾರಣ ಎಂದು ಚೀನಾ ಆರೋಪಿಸಿದೆ.








