ಯುಎಸ್ ಓಪನ್ 2020 ಪುರುಷರ ಸಿಂಗಲ್ಸ್ – ಮೂರನೇ ಸುತ್ತು ಪ್ರವೇಶಿಸಿದ ನೊವಾಕ್ ಜಾಕೊವಿಕ್
2020ರ ಯುಎಸ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಎರಡನೇ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ. ಅಗ್ರ ಶ್ರೇಯಾಂಕಿತ ನೊವಾಕ್ ಜಾಕೊವಿಕ್ ಅವರು ಎರಡನೇ ಸುತ್ತಿನ ಪಂದ್ಯದಲ್ಲಿ 6-7, 6-3, 6-4, 6-2ರಿಂದ ಬ್ರಿಟನ್ ನ ಕೈಲ್ ಎಡ್ಮಂಡ್ ಅವರನ್ನು ಸೋಲಿಸಿದ್ರು.
ರೋಜರ್ ಫೇಡರರ್ ಮತ್ತು ರಫೆಲ್ ನಡಾಲ್ ಅವರ ಅನುಪಸ್ಥಿತಿಯಲ್ಲಿ ನೊವಾಕ್ ಜಾಕೊವಿಕ್ ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರನಾಗಿದ್ದಾರೆ. ಪಂದ್ಯದ ಮೊದಲ ಸೆಟ್ ನಲ್ಲಿ ಜಾಕೊವಿಕ್ ಹಿನ್ನಡೆ ಅನುಭವಿಸಿದ್ರೂ ನಂತರ ಆಟದ ಮೇಲೆ ಲಯ ಕಂಡುಕೊಂಡು ಸುಲಭವಾಗಿ ಜಯ ಸಾಧಿಸಿದ್ದಾರೆ. ಜಾಕೊವಿಕ್ ಅವರ ಅನುಭವ ಮತ್ತು ತಾಳ್ಮೆಯ ಆಟಕ್ಕೆ ಎಡ್ಮಂಡ್ ಅವರು ತಲೆಬಾಗಲೇಬೇಕಾಯ್ತು.
ಇನ್ನುಳಿದಂತೆ ಎರಡನೇ ಸುತ್ತಿನ ಪಂದ್ಯಗಳಲ್ಲಿ ಡವಿಡೊವಿಚ್ ಫೋಕಿನಾ, ಸ್ಟ್ರಫ್, ಗೋಫಿನ್, ಝಿವೆರೆವ್, ಥಾಂಪ್ಸನ್, ಮನರಿನೊ, ಗಾಸ್ಕೇಟ್ ಅವರು ಜಯ ಸಾಧಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.








