ಯುಎಸ್ ಓಪನ್ ಟೆನಿಸ್- ಮಹಿಳಾ ಸಿಂಗಲ್ಸ್ : ಫೈನಲ್ ಪ್ರವೇಶಿಸಿದ ನೌಮಿ ಒಸಾಕಾ
ಪ್ರತಿಷ್ಠಿತ 2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ನೌಮಿ ಒಸಾಕಾ ಅವರು ಫೈನಲ್ ಪ್ರವೇಶಿಸಿದ್ದಾರೆ. ಎರಡು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿರುವ ನೌಮಿ ಒಸಾಕಾ ಅವರು ಇದೀಗ ಮೂರನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಯುಎಸ್ ಓಪನ್ ಟೂರ್ನಿಯ 11ನೇ ದಿನ ನಡೆದ ಮಹಿಳೆಯರ ಮೊದಲ ಸೆಮಿಫೈನಲ್ ನಲ್ಲಿ ನೌಮಿ ಒಸಾಕಾ ಅವರು 7-6, 3 -6, 6-3ರಿಂದ ಜೆನ್ನಿಫರ್ ಬ್ರ್ಯಾಂಡಿ ಅವರನ್ನು ಪರಾಭವಗೊಳಿಸಿದ್ರು. ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕಿತೆಯಾಗಿರುವ ನೌಮಿ ಒಸಾಕಾ ಅವರು ಫೈನಲ್ ನಲ್ಲಿ ಗ್ರ್ಯಾಂಡ್ ಸ್ಲ್ಯಾಂ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಅಥವಾ ಬೆಲರಾಸ್ ನ ವಿಕ್ಟೋರಿಯಾ ಅಝಾರೆಂಕಾ ಅವರನ್ನು ಎದುರಿಸಲಿದ್ದಾರೆ.
24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದು ದಾಖಲೆ ಸಮಗೊಳಿಸುವ ನಿಟ್ಟಿನಲ್ಲಿ ಸೆರೆನಾ ವಿಲಿಯಮ್ಸ್ ಕಾತರದಿಂದ ಎದುರು ನೋಡುತ್ತಿದ್ದಾರೆ. ಮಹಿಳೆಯರ ಎರಡನೇ ಸೆಮಿಫೈನಲ್ ಪಂದ್ಯವನ್ನು ಅಮ್ಮಂದಿರ ನಡುವಿನ ಹೋರಾಟ ಅಂತ ಬಿಂಬಿಸಲಾಗಿದೆ.








