ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆರೋಗ್ಯ ಏರುಪೇರು ?
ವಾಷಿಂಗ್ಟನ್, ಜೂನ್ 15: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಆರೋಗ್ಯ ಹದಗೆಟ್ಟಿದೆಯಾ ಎಂಬ ಸಂದೇಹಗಳು ಇದೀಗ ವ್ಯಕ್ತವಾಗುತ್ತಿದೆ. ಶನಿವಾರ ಅಮೆರಿಕ ಸೇನಾ ಅಕಾಡೆಮಿಯಲ್ಲಿ ಟ್ರಂಪ್ ಭಾಷಣ ಮಾಡುತ್ತಿದ್ದ ವೇಳೆ ಬಲಗೈ ಮೂಲಕ ಗ್ಲಾಸಿನಿಂದ ನೀರನ್ನು ಕುಡಿಯಲು ತೊಂದರೆ ಅನುಭವಿಸಿದ ವೀಡಿಯೋವೊಂದು ವೈರಲ್ ಆಗಿದ್ದು, ಆ ವೀಡಿಯೋದಿಂದಾಗಿ ಟ್ರಂಪ್ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದೆ.
ವೀಡಿಯೋದಲ್ಲಿ ಟ್ರಂಪ್ ಭಾಷಣ ಮಾಡುತ್ತಿದ್ದ ವೇಳೆ ಬಲಗೈನಿಂದ ಗ್ಲಾಸ್ ಎತ್ತಿ ನೀರು ಕುಡಿಯಲು ಕಷ್ಟ ಪಟ್ಟಿದ್ದು, ನಂತರ ಎಡ ಗೈ ನ ಸಹಾಯ ಪಡೆದುಕೊಂಡಿರುವ ದೃಶ್ಯಾವಳಿಗಳು ಸೆರೆಯಾಗಿದೆ.
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಸೇನಾ ಕಾಲೇಜಿನಲ್ಲಿ ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಮೆಟ್ಟಿಲುಗಳ ಮೂಲಕ ಇಳಿಯಲು ಸಾಧ್ಯವಾಗಿರಲಿಲ್ಲ.
ಕೆಲವರು ಮುಂಬರುವ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಪ್ರವಾಸಗಳಿಂದ ಟ್ರಂಪ್ ದಣಿದಿದ್ದಾರೆ ಎಂದು ಹೇಳಿದರೆ, ಇನ್ನೂ ಕೆಲವರು ಟ್ರಂಪ್ ಅವರ ಆರೋಗ್ಯ ಹದಗೆಟ್ಟಿದೆ ಎಂದು ಹೇಳುತ್ತಿದ್ದಾರೆ.
ಟ್ರಂಪ್ ಕೊರೊನಾ ವೈರಸ್ ಸೋಂಕಿಗೆ ಒಳಗಾಗದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಮಲೇರಿಯಾ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಎರಡು ವಾರಗಳ ಕಾಲ ಸೇವಿಸಿದ್ದರು. ಈ ಹಿನ್ನಲೆಯಲ್ಲಿ ಅಡ್ಡ ಪರಿಣಾಮ ಉಂಟಾಗಿರುವ ಸಾಧ್ಯತೆ ಇರುವುದರಿಂದ ಶ್ವೇತಭವನದ ವೈದ್ಯಕೀಯ ತಂಡವು ಇಸಿಜಿ ಸೇರಿದಂತೆ ನಿಯಮಿತವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತಪಾಸಣೆಗೆ ಒಳಪಡಿಸುತ್ತಿದೆ. ಟ್ರಂಪ್ ಅವರು ನಾನು ಆರೋಗ್ಯವಾಗಿದ್ದೇನೆ, ಯಾವುದೇ ತೊಂದರೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.