ಬೆಂಗಳೂರು: ಶಾಸಕರ ಹೆಸರಿನಲ್ಲಿ ನಕಲಿ ಸಹಿ, ಲೆಟರ್ ಹೆಡ್ ಬಳಕೆ ಮಾಡಿ ಕೆಲಸ ಕೊಡಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದ ಸ್ವಾಮಿ (35), ಅಂಜನ್ ಕುಮಾರ್ (28) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸ್ವಾಮಿ ಹಿಂದೆ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ರಾಜಕಾರಣಿಗಳ ಪರಿಚಯ ಮಾಡಿಕೊಂಡಿದ್ದ. ಈತನೇ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ನಕಲಿ ಸಹಿ ಮಾಡಿದ್ದಾನೆ. ನಂತರ ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದು ಪತ್ನಿ ವಿನುತಾ ಮತ್ತು ಅಂಜನ್ ಎಂಬುವರಿಗೆ ಶಾಸಕರ ಆಪ್ತ ಸಹಾಯಕ ಹುದ್ದೆ ಕೊಡಿಸಿದ್ದಾನೆ.
ಪತ್ನಿ ವಿನುತಾಗೆ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸ್ಸು ಮಾಡಿದ್ದಾನೆ. ಆದರೆ, ಇದನ್ನು ನಂಬಿದ್ದ ವಿಧಾನಸಭಾ ಸಚಿವಾಲಯ ಸಿಬ್ಬಂದಿ 2023ರ ಮೇನಲ್ಲಿ ವಿನುತಾಗೆ ಕೆಲಸ ನೀಡಿದ್ದರು. ಆನಂತರ ವಿನುತಾ ಕೆಲಸಕ್ಕೆ ಬಾರದೆ ಪ್ರತಿ ತಿಂಗಳು 30 ಸಾವಿರ ರೂ. ಸಂಬಳ ಪಡೆದಿದ್ದಳು. ಆದರೆ, ಇತ್ತೀಚೆಗೆ
ಗರ್ಭಿಣಿಯಾದ ನಂತರ ಕೆಲಸದಿಂದ ಬಿಡುಗಡೆಗೊಳಿಸುವಂತೆ ವಿನುತಾ ಪತ್ರ ಬರೆದಿದ್ದಳು. ಇದರ ಬಗ್ಗೆ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಈತ ಶಾಸಕ ರಘು ಹೆಸರಿನಲ್ಲಿ ಕೂಡ ನಕಲಿ ಸಹಿ ಸೃಷ್ಟಿಸಿ ಅಂಜನ್ ಕುಮಾರ್ ಎಂಬಾತನಿಗೆ ಕೆಲಸ ಕೊಡಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಸ್ವಾಮಿ ಪತ್ನಿ ವಿನುತಾಗೆ ಪೊಲೀಸರು ನೋಟಿಸ್ ನೀಡಿದ್ದಾರೆ.








