Uttar pradesh : ನಕಲಿ ಅಂಚೆ ಕಛೇರಿ ಸ್ಥಾಪಿಸಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಗ್ಯಾಂಗ್ ಬಂಧನ…
ಲಖನೌ: ಗ್ಯಾಂಗ್‌ನೊಂದು ನಕಲಿ ‘ಅಂಚೆ ಇಲಾಖೆ ಕಚೇರಿ’ಯನ್ನ ಸ್ಥಾಪಿಸಿ ಉದ್ಯೋಗ ನೀಡುವ ನೆಪದಲ್ಲಿ ಹಲವಾರು ಯುವಕರನ್ನ ವಂಚಿಸಿರುವ ಪ್ರಕರಣ ಉತ್ತರ ಪ್ರದೇಶದ ಲಕ್ನೋದಲ್ಲಿ ಬೆಳಕಿಗೆ ಬಂದಿದೆ.
ಯುಪಿ ಎಸ್‌ಟಿಎಫ್ ಪೊಲೀಸರು ಶುಕ್ರವಾರ ಈ ದಂಧೆಯ ಪ್ರಕರಣವನ್ನ ಭೇಧಿಸದೆ. ಅಲ್ಲದೇ ಗ್ಯಾಂಗ್ ನ ನಾಲ್ವರು ಸದಸ್ಯರನ್ನ ಬಂಧಿಸಿದೆ. ಆರೋಪಿಗಳನ್ನ ರಾಹುಲ್ ಸಿಂಗ್, ಪವನ್ ವರ್ಮಾ (ಗುತ್ತಿಗೆಯ ಅಂಚೆ ಇಲಾಖೆ ಉದ್ಯೋಗಿ), ಅಜಿತ್ ಸಿಂಗ್ ಮತ್ತು ಅಂಕಿತ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ.
ಪವನ್ ವರ್ಮಾ ರೈಲ್ವೆ ಅಂಚೆ ಇಲಾಖೆಯ ರೈಲ್ವೆ ಮೇಲ್ ಸೇವೆಯಲ್ಲಿ ಜಿಪಿಒ ಹುದ್ದೆಯಲ್ಲಿದ್ದಾರೆ. ಗ್ಯಾಂಗ್ ಸದಸ್ಯರಾದ ಆಕಾಂಕ್ಷಾ ಶ್ರೀವಾಸ್ತವ ಮತ್ತು ಮೋಹಿತ್ ಖರೆ ಅವರ ಮೂಲಕ ನಕಲಿ ನೇಮಕಾತಿ ಪತ್ರಗಳನ್ನು ಪಡೆಯುತ್ತಿದ್ದರು ಎಂದು ರಾಹುಲ್ ಸಿಂಗ್ ವಿಚಾರಣೆಯ ವೇಳೆ ಬಹಿರಂಗಪಡಿಸಿದ್ದಾರೆ ಎಂದು ಎಸ್‌ಟಿಎಫ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ವಿಕ್ರಮ್ ಸಿಂಗ್ ಹೇಳಿದ್ದಾರೆ.
ಉದ್ಯೋಗಾಕಾಂಕ್ಷಿಗಳನ್ನ ನಂಬಿಸುವ ಸಲುವಾಗಿ ಗ್ಯಾಂಗ್ ಅಮಾಯಕರನ್ನ ಅಂಚೆ ಇಲಾಖೆಗೆ ಭೇಟಿ ಮಾಡಿಸಿ ವಂಚಿಸುತ್ತಿತ್ತು. ಪವನ್ ವರ್ಮಾ ಭಾರತೀಯ ಅಂಚೆ ಸೇವೆಗಳ ಹಿರಿಯ ಅಧಿಕಾರಿ ಎಂದು ಆಕಾಂಕ್ಷಿಗಳಿಗೆ ತೋರಿಸಿ ನಂಬಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ಗ್ಯಾಂಗ್ ಹಲವು ವಿಭಾಗಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೆಲಸದ ಸ್ವರೂಪಕ್ಕೆ ಅನುಗುಣವಾಗಿ 5 ಲಕ್ಷದಿಂದ 20 ಲಕ್ಷ ರೂಪಾಯಿ ತೆಗೆದುಕೊಳ್ಳುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಇದೀಗ ಎಸ್‌ಟಿಎಫ್ ಪೊಲೀಸರು 12 ಯುವಕರನ್ನ ವಂಚಿಸಿದ ಜಾಬ್ ರಾಕೆಟ್ ಅನ್ನ ಬೇಧಿಸಿ ಅಪರಾಧಿಗಳನ್ನ ಕಂಬಿ ಹಿಂದೆ ತಳ್ಳಿದ್ದಾರೆ.
Uttar pradesh : A gang was arrested who cheated by setting up a fake post office and giving jobs.








