ಬಸ್ ಗೆ ಡಿಕ್ಕಿ ಹೊಡೆದ ಟ್ರಕ್ : ಭೀಕರ ಅಪಘಾತದಲ್ಲಿ 18 ಮಂದಿ ಸಾವು
ಉತ್ತರಪ್ರದೇಶ : ಟ್ರಕ್ ಒಂದು ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 18 ಜನರು ಮೃತಪಟ್ಟು ಹಲವರು ಗಂಭೀರ ಗಾಯಗೊಂಡ ದಾರುಣ ಘಟನೆ ಉತ್ತರಪ್ರದೇಶದ ಬಾರಬಾಂಕಿಯಲ್ಲಿ ನಡೆದಿದೆ. ಇಲ್ಲಿನ ರಾಮ್ ಸ್ನೇಹಿಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಲಖನೌ – ಅಯೋಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್ ಗೆ ಹಿಂದಿನಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ ಹೊಡೆದಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ಸಿನಡಿ ಹಲವಾರು ಮಂದಿ ಸಿಲುಕಿಕೊಂಡಿದ್ದು, ಅವರನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿರುವುದಾಗಿ ಲಖನೌ ವಲಯ ಎಡಿಜಿ ನಾರಾಯಣ್ ಸಬತ್ ಮಾಹಿತಿ ನೀಡಿದ್ದಾರೆ. ಬಸ್ ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಎಲ್ಲರೂ ಕಾರ್ಮಿಕರಾಗಿದ್ದು ಹರ್ಯಾಣದ ಪಲ್ವಾಲದಿಂದ ಬಿಹಾರದ ಕಡೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಯಕ್ಸಲ್ ಮುರಿದಿದ್ದರಿಂದ ರಾಮ್ ಸನೇಹಿ ಘಾಟ್ ಪೊಲೀಸ್ ಸ್ಟೇಷನ್ ಬಳಿಯಿರುವ ಢಾಬ ಬಳಿ ಬಸ್ ಅನ್ನು ನಿಲ್ಲಿಸಲಾಗಿತ್ತು. ಈ ವೇಳೆ ವೇಗವಾಗಿ ಬಂದ ಟ್ರಕ್ ಒಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 18 ಮಂದಿ ಸಾವನ್ನಪ್ಪಿದ್ದಾರೆ. ರಾಮ್ ಸನೇಹಿ ಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1.30ರಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 19ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಸದ್ಯದ ಘಟನೆ ಬಗ್ಗೆ ಯುಪಿ ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಶೀಘ್ರವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.








