ಬಿಎಸ್ ವೈ ಅಧಿಕಾರಕ್ಕೆ ಅಂಟಿಕೊಂಡು ಲೂಟಿಯಲ್ಲಿ ತಲ್ಲೀನರಾಗಿದ್ದಾರೆ : ಉಗ್ರಪ್ಪ
ಬೆಂಗಳೂರು : ಯಡಿಯೂರಪ್ಪನವರಿಗೆ ಸ್ವಲ್ಪವಾದರೂ ಸ್ವಾಭಿಮಾನ ಇದ್ದಿದ್ದರೆ ಬಿಜೆಪಿಯಲ್ಲಿನ ಆಂತರಿಕ ವಿದ್ಯಮಾನಗಳನ್ನು ನೋಡಿ ರಾಜೀನಾಮೆ ನೀಡಬೇಕಿತ್ತು.
ಆದರೆ ಯಡಿಯೂರಪ್ಪನವರು ಅಧಿಕಾರಕ್ಕೆ ಅಂಟಿಕೊಂಡಿರೋದು ನೋಡಿದರೆ ಲೂಟಿಯಲ್ಲಿ ತಲ್ಲೀನರಾಗಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಟೀಕಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಈ ಇಳಿ ವಯಸ್ಸಿನಲ್ಲಿ ಇಂಥ ಸ್ಥಿತಿ ಬರಬಾರದಾಗಿತ್ತು.
ಯಡಿಯೂರಪ್ಪನವರಿಗೆ ಸ್ವಲ್ಪವಾದರೂ ಸ್ವಾಭಿಮಾನ ಇದ್ದಿದ್ದರೆ ಬಿಜೆಪಿಯಲ್ಲಿನ ಆಂತರಿಕ ವಿದ್ಯಮಾನಗಳನ್ನು ನೋಡಿ ರಾಜೀನಾಮೆ ನೀಡಬೇಕಿತ್ತು.
ಆದರೆ ಯಡಿಯೂರಪ್ಪನವರು ಅಧಿಕಾರಕ್ಕೆ ಅಂಟಿಕೊಂಡಿರೋದು ನೋಡಿದರೆ ಲೂಟಿಯಲ್ಲಿ ತಲ್ಲೀನರಾಗಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಟೀಕಿಸಿದರು.
ಅಲ್ಲದೆ ಬಿಜೆಪಿಯಲ್ಲಿನ ಆಂತರಿಕ ಕಲಹದಿಂದ ರಾಜ್ಯದ ಜನರ ಬದುಕು ದುಸ್ತರವಾಗಿದೆ. ಯಡಿಯೂರಪ್ಪನವರ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನೆಲೆ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಈ ಹಿನ್ನೆಲೆ ರಾಜ್ಯಪಾಲರು ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಮುಂದುವರೆದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಉಗ್ರಪ್ಪ, ಬಿಜೆಪಿ ಸರ್ಕಾರ ಮೂರು ಬಣಗಳಾಗಿವೆ.
ಯಡಿಯೂರಪ್ಪನವರ ಬದಲಾವಣೆ ಆಗಬಾರದು ಎಂದು ಒಂದು ವರ್ಗ, ಆಗಬೇಕು ಎಂದು ಮತ್ತೊಂದು ವರ್ಗ, ಪಕ್ಷದ ನಾಯಕರು ಹೇಳಿದಂತೆ ಕೇಳುತ್ತೇವೆ ಎಂದು ಮತ್ತೊಂದು ವರ್ಗ ಇದೆ.
ಬಿಜೆಪಿಯ ಗುಂಪುಗಾರಿಕೆ ಯಾವ ಹಂತಕ್ಕೆ ಹೋಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ. 420, ಕಳ್ಳರು, ರಾಕ್ಷಸರು, ಲೂಟಿಕೋರರು, ಅರೆ ಹುಚ್ಚರು ಎಂದೆಲ್ಲಾ ಪರಸ್ಪರ ನಿಂದಿಸುತ್ತಿದ್ದಾರೆ. ಬಿಜೆಪಿಯನ್ನು ಶಿಸ್ತಿನ ಪಕ್ಷ ಅಂತಾರೆ. ಎಲ್ಲಿದೆ ಶಿಸ್ತು ಎಂದು ವ್ಯಂಗ್ಯವಾಡಿದರು.