ಬೆಳಗಾವಿಯ ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿಗೆ ರಜೆ ಘೋಷಣೆ Saaksha Tv
ಬೆಳಗಾವಿ: ಬೆಳಗಾವಿಯ ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿಗೆ ಪ್ರಾಚಾರ್ಯ ಡಾ.ಪ್ರಕಾಶ್ ಪಾಟೀಲ್ ಅನಿರ್ದಿಷ್ಟಾವಧಿ ರಜೆ ಘೋಷಿಸಿದ್ದಾರೆ
ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರು, ವಿದ್ಯಾರ್ಥಿನಿಯರು ಆದೇಶವನ್ನು ಉಲ್ಲಂಘಿಸಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಾಲೇಜಿನ ಪ್ರಾಚಾರ್ಯ ಡಾ.ಪ್ರಕಾಶ್ ಪಾಟೀಲ್ ತರಗತಿಗೆ ಭೇಟಿ ನೀಡಿ, ತರಗತಿ ನಡೆಯುವಾಗ ಹಿಜಾಬ್ ಧಾರಣೆಗೆ ಅವಕಾಶ ಇಲ್ಲ. ಹಿಜಾಬ್ ತೆಗೆದು ತರಗತಿಗೆ ಹಾಜರಾಗಿ ಎಂದು ಮನವಿ ಮಾಡಿದರು. ಹಿಜಾಬ್ ತೆಗೆಯಲು ಒಪ್ಪದ ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿದರು.
ತರಗತಿಯೊಳಗೆ ಹಿಜಾಬ್ ಧಾರಣೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ಕೆಲ ಹೊತ್ತು ಧರಣಿ ನಡೆಸಿದರು. ತರಗತಿ ವೇಳೆ ಬುರ್ಖಾ, ನಕಾಬ್ ತೆಗೆಯುತ್ತೇವೆ. ಆದರೆ, ಹಿಜಾಬ್ ತಗೆಯುವುದಿಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಾವು ಹಿಜಾಬ್ ತಗೆಯಲ್ಲ, ತರಗತಿಗೆ ಹಾಜರಾಗಲು ನಮಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಈ ಕಾರಣದಿಂದ ಮುಂದಿನ ಆದೇಶದವರೆಗೂ ಕಾಲೇಜಿಗೆ ರಜೆ ಇರಲಿದೆ. ಈ ಬಗ್ಗೆ ಮಾತನಾಡಿದ ಪ್ರಾಚಾರ್ಯರು ಡಿಸಿ ಜೊತೆಗೆ ಚರ್ಚಿಸುವೆ. ಯಾವ ವಿದ್ಯಾರ್ಥಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಕಾಲೇಜು ಮರಳಿ ಪ್ರಾರಂಭವಾದ ಬಳಿಕ ಹೆಚ್ಚುವರಿ ತರಗತಿ ತಗೆದುಕೊಳ್ಳುತ್ತೇವೆ. ಸದ್ಯ ಯಾವ ಮಕ್ಕಳಿಗೂ ತೊಂದರೆಯಾಗಬಾರದು ಎಂದು ರಜೆ ಘೋಷಿಸುತ್ತಿದ್ದೇವೆ ಎಂದು ತಿಳಿಸಿದರು.








