ಈ ವರ್ಷದ ಅಂತ್ಯಕ್ಕೆ ಎಲ್ಲಾ ನಾಗರಿಕರಿಗೂ ಲಸಿಕೆ : ಡಾ.ಕೆ.ಸುಧಾಕರ್
ಬೆಂಗಳೂರು : ಈ ವರ್ಷದ ಅಂತ್ಯದೊಳಗೆ ಪ್ರತಿ ವ್ಯಕ್ತಿಗೆ ಎರಡು ಡೋಸ್ ಲಸಿಕೆ ಹಾಕಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಲಸಿಕೆ ಬಗ್ಗೆ ಮಾಹಿತಿ ನೀಡಿದರು. ಈ ತಿಂಗಳಲ್ಲಿ ಖಾಸಗಿಯವರು 24,46,000 ಡೋಸ್ ವ್ಯಾಕ್ಸಿನ್ ಗೆ ಬೇಡಿಕೆ ಇಟ್ಟಿದ್ದಾರೆ.
15,80,520 ಡೋಸ್ ವ್ಯಾಕ್ಸಿನ್ ಈಗಾಗಲೇ ಬಂದಿದೆ. ಈ ತಿಂಗಳಲ್ಲಿ 75 ರಿಂದ 80 ಲಕ್ಷ ಲಸಿಕೆ ನೀಡುತ್ತೇವೆ. ಇದುವರೆಗೂ 1.55 ಕೋಟಿ ಲಸಿಕೆ ನೀಡಲಾಗಿದೆ.
ಈ ತಿಂಗಳು ಕನಿಷ್ಠ 80 ಲಕ್ಷ ಲಸಿಕೆ ನೀಡಿ ಈ ವರ್ಷದ ಅಂತ್ಯದೊಳಗೆ ಪ್ರತಿ ವ್ಯಕ್ತಿಗೆ ಎರಡು ಡೋಸ್ ಲಸಿಕೆ ಹಾಕಿಸಲಾಗುವುದು ಎಂದರು.
ಇನ್ನು ಅನ್ಲಾಕ್ ಬಗ್ಗೆ ನಿರ್ಧಾರವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ. ಎರಡೂವರೆಗೆ ಟಾಸ್ಕ್ ಫೋರ್ಸ್ ಸಭೆ ಇದೆ.
ಮೂರನೇ ಅಲೆಯ ಕುರಿತು ಚರ್ಚೆ ಆಗಲಿದೆ. ದೇವಿ ಪ್ರಸಾದ್ ಶೆಟ್ಟಿಯವರ ವರದಿ ಸಿದ್ಧವಿದ್ದರೆ ಚರ್ಚೆ ನಡೆಸುತ್ತೇವೆ ಎಂದು ಸಚಿವರು ತಿಳಿಸಿದರು.