ಲಸಿಕೆ ಪ್ರಮಾಣಪತ್ರ ಕಡ್ಡಾಯವಲ್ಲ ಕೇಂದ್ರ: ಗೊಂದಲದಲ್ಲಿವೆ ಚಿತ್ರಮಂದಿರಗಳು Saaksha Tv
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವುದರಿಂದ ಸರಕಾರ ಜನವರಿ 4ರಂದು ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದರ ಅನ್ವಯ ಮಾಲ್, ಚಿತ್ರಮಂದಿರಗಳಿಗೆ ಪ್ರವೇಶ ಪಡೆಯಲು ಕಡ್ಡಾಯವಾಗಿ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು ಎಂದು ಸರ್ಕಾರ ತಿಳಿಸಿದೆ. ಆದರೆ ಸರ್ಕಾರದ ಈ ನಿಯಮ ಸದ್ಯ ಎಲ್ಲರಲ್ಲೂ ಗೊಂದಲ ಹೆಚ್ಚಿಸಿದೆ.
ಕಾರಣ ಕೇಂದ್ರ ಸರಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ ಕೊರೊನಾ ಲಸಿಕೆ ಪ್ರಮಾಣಪತ್ರ ಕಡ್ಡಾಯವಲ್ಲ ಎಂದು ಹೇಳಿಕೆ ನೀಡಿತ್ತು. ಆದರೆ ರಾಜ್ಯ ಸರಕಾರದ ನಿಯಮದ ಪ್ರಕಾರ ಜನರು ಪ್ರವೇಶ ಪಡೆಯಲು ಲಸಿಕೆ ಪಡೆದ ಪ್ರಮಾಣಪತ್ರ ತೋರಿಸಬೇಕು. ಆದರೆ ಅದನ್ನು ಕಡ್ಡಾಯಗೊಳಿಸಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ನಲ್ಲಿ ತಿಳಿಸಿದೆ.
ಇದರಿಂದ ಜನರು ಚಿತ್ರಮಂದಿರದ ಒಳಗೆ ತೆರಳುವಾಗ ಪ್ರಮಾಣಪತ್ರ ತೋರಿಸಲು ಹಿಂದೇಟು ಹಾಕಬಹುದು ಎನ್ನಲಾಗುತ್ತಿದೆ.ಈಗಾಗಲೇ ಲಸಿಕಾ ಪ್ರಮಾಣಪತ್ರದ ನಿಬಂಧನೆಗಳನ್ನು ಪಾಲಿಸುವಾಗ ಕಷ್ಟ ಆಗುತ್ತಿತ್ತು. ಈಗ ಕೇಂದ್ರ ಸರ್ಕಾರದ ಈ ಹೇಳಿಕೆಯಿಂದ ಇನ್ನು ಮುಂದೆ ಪ್ರೇಕ್ಷಕರು ಪ್ರಮಾಣ ಪತ್ರ ತೋರಿಸಲು ಹಿಂಜರಿದು ಪ್ರದರ್ಶಕರನ್ನೇ ಪ್ರಶ್ನಿಸಬಹುದು. ಆದ್ದರಿಂದ ಸರ್ಕಾರದ ಈ ಭಿನ್ನ ನಿಲುವಿನ ಬಗ್ಗೆ ಗೊಂದಲವುಂಟಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳ ಸ್ಪಷ್ಟೀಕರಣ ಬೇಕಾಗಿದೆ ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ಹೇಳಿದೆ.