ಜಿನೀವಾ : ಮಹಾಮಾರಿ ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯುವ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದರೂ 2021ರ ನಂತರವೇ ಕೊರೊನಾಗೆ ಪೂರ್ತಿ ಪ್ರಮಾಣದ ಲಸಿಕೆ ಸಿಗೋ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಬುಧವಾರ ಈ ಬಗ್ಗೆ ಡಬ್ಲ್ಯುಎಚ್ಒ ತುರ್ತು ವಿಭಾಗದ ಮುಖ್ಯಸ್ಥ ಮೈಕ್ ರಯಾನ್ ಮಾತನಾಡಿ, ವ್ಯಾಕ್ಸಿನ್ ಅಭಿವೃದ್ಧಿ ಸಂಪತ್ತು ಸೃಷ್ಠಿಗೆ ಅಥವಾ ಕೇವಲ ಬಡವರಿಗಾಗಿಯೋ ಅಲ್ಲ. ಜಗತ್ತಿನಲ್ಲಿ ಮಾನವನ ಉಳಿವಿಗಾಗಿ ಈ ವ್ಯಾಕ್ಸಿನ್ ಅತ್ಯವಶ್ಯಕವಾಗಿದೆ. ಹೀಗಾಗಿ ಹೆಮ್ಮಾರಿ ವೈರಸ್ ಗೆ ಕಡಿವಾಣ ಹಾಕಬಲ್ಲ ಸಮರ್ಥವಾದ ಲಸಿಕೆ ಅಭಿವೃದ್ಧಿಗಾಗಿ ವಿವಿಧ ಸಂಸ್ಥೆಗಳ ಜೊತೆಗೂಡಿ ಡಬ್ಲ್ಯುಎಚ್ಒ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಸದ್ಯ ವಿವಿಧ ವ್ಯಾಕ್ಸಿನ್ ಗಳು ಪ್ರಯೋಗ ಅಂತಿಮ ಘಟ್ಟದಲ್ಲಿದ್ದು, ಇನ್ನೂ ಕೆಲವು ಮೂರನೇ ಹಂತದಲ್ಲಿವೆ. ಆದರೆ ಇವುಗಳಲ್ಲಿ ಇದುವರೆಗೂ ಯಾವೊಂದು ವ್ಯಾಕ್ಸಿನ್ ವಿಫಲವಾಗಿಲ್ಲ ಇದು ಅಚ್ಚರಿಗೆ ಕಾರಣವಾಗಿದೆ. ಇನ್ನು 2021 ರೊಳಗೆ ಜನರಿಗೆ ಲಸಿಕೆ ನೀಡುವುದು ಸಾಧ್ಯವಾಗದೇ ಇರಬಹುದು. ವ್ಯಾಕ್ಸಿನ್ ವಿತರಣೆಯಲ್ಲಿ ಯಾವುದೇ ತಾರತಮ್ಯ ಇರೋದಿಲ್ಲ ಎಂದು ಮೈಕ್ ರಯಾನ್ ತಿಳಿಸಿದ್ದಾರೆ.