800 ಕುರಿಗಳನ್ನು ಚೀನಾದ ರಾಯಭಾರ ಕಚೇರಿಗೆ ನುಗ್ಗಿಸಿ ಪ್ರತಿಭಟಿಸಿದ್ದ ವಾಜಪೇಯಿ
ಹೊಸದಿಲ್ಲಿ, ಜೂನ್ 27: ಚೀನಾದ ಕುತಂತ್ರವನ್ನು ಜಗತ್ತಿನೆದುರು ಬಹಿರಂಗಪಡಿಸುವುದು ಸವಾಲಿನ ಕೆಲಸವೇ ಆಗಿದೆ. ಅಷ್ಟೇ ಅಲ್ಲ ಜಗತ್ತನ್ನು ಅಚ್ಚರಿಗೊಳಿಸುವಲ್ಲಿ ಚೀನಾ ಯಾವತ್ತೂ ವಿಫಲವಾಗಿಲ್ಲ. ಅದರಲ್ಲಿ ಮುಖ್ಯವಾಗಿ ತನ್ನ ದೇಶೀಯ ಹಾಗೂ ವಿದೇಶಿ ನೀತಿಗಳ ಮೂಲಕ ಭಾರತಕ್ಕೆ ಚೀನಾ ವಂಚಿಸುತ್ತಲೇ ಬಂದಿದೆ. ಆದರೆ ಒಮ್ಮೆ 1965 ರಲ್ಲಿ ಯುವ ಸಂಸದೀಯ ಪಟು ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ರಾಜಕೀಯ ಚಾಣಾಕ್ಷತನದಿಂದ ಚೀನಾವನ್ನು ಅಣಕಿಸಿದ್ದರು.
1967 ರಲ್ಲಿ ಭಾರತದೊಂದಿಗೆ ಸೈನ್ಯದ ಮುಖಾಮುಖಿಗಾಗಿ ಚೀನಾ ಬಳಸಿದ ಅನೇಕ ನೆಪಗಳಲ್ಲಿ ಒಂದು ಭಾರತೀಯ ಸೈನಿಕರು ತನ್ನ ಕುರಿ ಮತ್ತು ಯಾಕ್‌ಗಳನ್ನು ಅಪಹರಿಸಿದ್ದಾರೆ ಎಂಬುದಾಗಿತ್ತು. ಚೀನಾ ಆಗಸ್ಟ್-ಸೆಪ್ಟೆಂಬರ್ 1965 ರಲ್ಲಿ ಈ ಘೋಷಣೆ ಮಾಡಿತು.
ಭಾರತದ ರಕ್ಷಣೆಯಲ್ಲಿದ್ದ ಸಿಕ್ಕಿಂ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ತನ್ನ ಭೂಭಾಗವನ್ನು ಹೆಚ್ಚಿಸಿಕೊಳ್ಳಲು ಚೀನಾ ಹೊಂಚು ಹಾಕುತ್ತಿತ್ತು. ಅದೇ ಸಮಯದಲ್ಲಿ ಕಾಶ್ಮೀರದೊಳಕ್ಕೆ ಪಾಕಿಸ್ಥಾನದಿಂದ ನುಸುಳುತ್ತಿದ್ದ ನುಸುಳುಕೋರರನ್ನು ಎದುರಿಸುವುದರಲ್ಲಿ ಭಾರತ ನಿರತವಾಗಿತ್ತು.
ಕೇವಲ ಮೂರು ವರ್ಷಗಳ ಹಿಂದೆ ಭಾರತವು ಯುದ್ಧದಲ್ಲಿ ಅವಮಾನಕರ ಸೋಲನ್ನು ಅನುಭವಿಸಿತ್ತು. ಚೀನಾ ಮತ್ತೊಮ್ಮೆ ಭಾರತಕ್ಕೆ 1962 ತರಹದ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿತ್ತು. ಆದರೆ ಚೀನಾದ ಲೆಕ್ಕಾಚಾರ ಭಾರತದ ಬಗ್ಗೆ ತಪ್ಪಾಗಿತ್ತು. ಯಾಕೆಂದರೆ ಭಾರತ 1962ರ ಪರಿಸ್ಥಿತಿಗಿಂತ ಹೆಚ್ಚಿನ ರೀತಿಯಲ್ಲಿ ಪರಿಸ್ಥಿತಿ ಎದುರಿಸಲು ಸಿದ್ಧವಾಗಿತ್ತು.
ಭಾರತೀಯ ಸೈನಿಕರು 800 ಕುರಿ ಮತ್ತು 59 ಯಾಕ್‌ಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಚೀನಾ ಭಾರತೀಯ ಅಧಿಕಾರಿಗಳಿಗೆ ಪತ್ರ ಬರೆಯಿತು. ಭಾರತದ ಅಧಿಕಾರಿಗಳು ಇಂತಹ ಹಾಸ್ಯಾಸ್ಪದ ಆರೋಪವನ್ನು ನಿರಾಕರಿಸಿ ಪ್ರತ್ಯುತ್ತರ ನೀಡಿದರು. ಆದರೆ ಜನಸಂಘದ ಯುವ ಮುಖಂಡ 42ರ ಹರೆಯದ ವಾಜಪೇಯಿ ಮಾತ್ರ ಸುಮ್ಮನೆ ಕುಳಿತು ಕೊಳ್ಳಲಿಲ್ಲ. ಅವರು ಚೀನಾ ಉರಿದುಕೊಳ್ಳುವಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು!
ಅಟಲ್ ಬಿಹಾರಿ ವಾಜಪೇಯಿ 800 ಕುರಿಗಳ ಹಿಂಡಿನೊಂದಿಗೆ ಸೆಪ್ಟೆಂಬರ್ ಅಂತ್ಯದಲ್ಲಿ ನವದೆಹಲಿಯ ಚೀನಾ ರಾಯಭಾರ ಕಚೇರಿಗೆ ನೇರವಾಗಿ ಹೋದರು. ಕುರಿಗಳ ಕುತ್ತಿಗೆಯಲ್ಲಿ “ನನ್ನನ್ನು ತಿನ್ನಿರಿ ಆದರೆ ಜಗತ್ತನ್ನು ಉಳಿಸಿ” ಎಂದು ಫಲಕಗಳನ್ನು ನೇತು ಹಾಕಿ ಅವುಗಳನ್ನು ರಾಯಭಾರ ಕಚೇರಿಯ ಆವರಣದೊಳಕ್ಕೆ ನುಗ್ಗಿಸಿಬಿಟ್ಟರು .
ಇದು ಚೀನಾವನ್ನು ತೀವ್ರವಾಗಿ ಕೆರಳಿಸಿತು, ಚೀನಾ ಲಾಲ್ ಬಹದ್ದೂರ್ ಶಾಸ್ತ್ರಿ ನೇತೃತ್ವದ ಸರ್ಕಾರಕ್ಕೆ ಇನ್ನೊಂದು ಪತ್ರವನ್ನು ಬರೆದು, ವಾಜಪೇಯಿ ಅವರ ಪ್ರತಿಭಟನೆಯಿಂದ ಚೀನಾದ ರಾಷ್ಟ್ರಕ್ಕೆ ಅವಮಾನವಾಗಿದೆ ಮತ್ತು ಇದು ಶಾಸ್ತ್ರಿ ಸರ್ಕಾರದ ಬೆಂಬಲದೊಂದಿಗೆ ಸಂಭವಿಸಿದೆ ಎಂದು ಆರೋಪಿಸಿತು
ಚೀನಾದ ಪತ್ರಕ್ಕೆ ಭಾರತ, ದೆಹಲಿಯ ಹಲವಾರು ನಿವಾಸಿಗಳು ಸುಮಾರು 800 ಕುರಿಗಳನ್ನು ಮೆರವಣಿಗೆಯಲ್ಲಿ ಕರೆದೊಯ್ದರು. ಭಾರತದ ಪ್ರಾಧಿಕಾರಗಳಿಗೆ ಈ ಪ್ರದರ್ಶನಕ್ಕೂ ಯಾವುದೇ ಸಂಬಂಧವಿಲ್ಲ. ಚೀನಾ ಭಾರತದ ವಿರುದ್ಧವಾಗಿ ಯುದ್ಧ ನಡೆಸಲಿದೆ ಎಂದು ದೆಹಲಿಯ ನಿವಾಸಿಗಳು ತಮ್ಮ ಅಸಮಾಧಾನವನ್ನು ಸ್ವಯಂಪ್ರೇರಿತರಾಗಿ, ಶಾಂತಿಯುತವಾಗಿ ಹಾಗೂ ಉತ್ತಮ ಹಾಸ್ಯಮಯ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿತು.
1967ರಲ್ಲಿ ಹಲವಾರು ನೆಪಗಳನ್ನು ಮುಂದಿಟ್ಟುಕೊಂಡು ಚೀನಾ ಭಾರತದ ಮೇಲೆ ಯುದ್ಧ ಸಾರಿತು. ಆದರೆ ಈ ಬಾರಿ ಸಕಲ ರೀತಿಯಲ್ಲೂ ಸಜ್ಜಾಗಿದ್ದ ಭಾರತ ಚೀನಾದ ಮೇಲೆ ಪ್ರಾಬಲ್ಯ ವನ್ನು ಮೆರೆದು, 1962ರ ತಪ್ಪುಗಳು ಮತ್ತೊಮ್ಮೆ ಪುನಾರವರ್ತನೆಯಾಗಲು ಬಿಡುವುದಿಲ್ಲ ಎಂದು ಚೀನಾಕ್ಕೆ ತಕ್ಕ ಪಾಠ ಕಲಿಸಿತು.