ಇತರರಿಗೋಸ್ಕರ ಶ್ರಮಿಸಿದ ಮಹಾತ್ಮರ ಸಾಲಲ್ಲಿ ವಾಜಪೇಯಿಗೆ ಅಗ್ರ ಸ್ಥಾನ Vajpayee saaksha tv
ಬೆಂಗಳೂರು : ಇತರರಿಗೋಸ್ಕರ ಶ್ರಮಿಸಿದ ಮಹಾತ್ಮರ ಸಾಲಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಗ್ರ ಸ್ಥಾನ ಎಂದು ಪ್ರೊ.ಮೈಲಾರಪ್ಪ ಹೇಳಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಪ್ರೊ.ಮೈಲಾರಪ್ಪ ಅವರು ಮಾತನಾಡಿ, ಇತರರಿಗೋಸ್ಕರ ಶ್ರಮಿಸಿದ ಮಹಾತ್ಮರ ಸಾಲಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಗ್ರ ಸ್ಥಾನ. ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ಅವರು ಉತ್ತಮ ಪ್ರಜಾಪ್ರಭುತ್ವವಾದಿ. ಅಲ್ಲದೇ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಂತನೆಗಳನ್ನಿಟ್ಟುಕೊಂಡು ರಾಜಕೀಯ ಬಲದಿಂದ ದೇಶದ ಅಭಿವೃದ್ಧಿಗೆ ವಾಜಪೇಯಿ ಅವರು ಸಾಕಷ್ಟು ಶ್ರಮಿಸಿದ್ದಾರೆ.
ಭಾರತದ ಏಳಿಗೆಯ ಕನಸು ಕಂಡು ಅದರಡಿ ಕಾರ್ಯ ನಿರ್ವಹಿಸಿದ ಮಹಾತ್ಮರಾದ ವಾಜಪೇಯಿ ಅವರ ದಾರಿಯಲ್ಲಿಯೇ ಅಭಿವೃದ್ಧಿಯನ್ನು ಸಂಕಲ್ಪವನ್ನಾಗಿಸಿಕೊಂಡು ಮುನ್ನಡೆಯುತ್ತಿರುವ ಗೋವಿಂದರಾಜನಗರ ಶಾಸಕರಾದ ವಿ.ಸೋಮಣ್ಣ ಅವರ ಅಭಿವೃದ್ಧಿ ಕಾರ್ಯಗಳ ಅಭಿಮಾನಿ ನಾನು. ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಮೋಹನ್ ಅವರು ಮಾತನಾಡಿ, ವಾಜಪೇಯಿ ಅವರು ಕೇವಲ ರಾಜಕೀಯ ನೇತಾರರಾಗಿರಲಿಲ್ಲ. ಬದಲಿಗೆ ಉತ್ತಮ ಕವಿ ಹಾಗೂ ವಾಗ್ಮಿಯಾಗಿಯೂ ಗುರ್ತಿಸಿಕೊಂಡಿದ್ದರು. ಯಾವುದೇ ರೀತಿಯ ಗರ್ವ, ಅಹಂಕಾರವನ್ನು ಹತ್ತಿರಕ್ಕೆ ಸುಳಿಯಲು ಬಿಡದೇ, ಜನಾನುರಾಗಿ ಎನಿಸಿಕೊಂಡಿದ್ದರು ಎಂದರು.
ಇದಕ್ಕೂ ಮುನ್ನ ಗೋವಿಂದರಾಜನಗರದ ಎಲ್ಲ ವಾರ್ಡ್ ಗಳಲ್ಲಿ ವಾಜಪೇಯಿ ಅವರಿಗೆ ಪುಷ್ಪ ನಮನ ಸಲ್ಲಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಪುಸ್ಕರಿಸಲಾಯಿತು. ಇದರ ಜೊತೆಗೆ ಭಾರತೀಯ ಜನಸಂಘದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು. ಇನ್ನು ಉಚಿತ ಆರೋಗ್ಯ ಶಿಬಿರ ಹಾಗೂ ನೇತ್ರದಾನ ಶಿಬಿರವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಮಂಡಲ ಅಧ್ಯಕ್ಷರಾದ ವಿಶ್ವನಾಥ ಗೌಡ, ಬಿಬಿಎಂಪಿ ಮಾಜಿ ಸದಸ್ಯರಾದ ವಾಗೀಶ್, ದಾಸೇಗೌಡ, ಉಮೇಶ್ ಶೆಟ್ಟಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.









