Vasishtha Simha : ಕಡಲ ತೀರದಲ್ಲಿ ಕೋಟಿ ವೆಚ್ಚದಲ್ಲಿ ಸಿದ್ಧವಾಯ್ತು ‘ಲವ್ ಲಿ’ ಸೆಟ್…
ವಸಿಷ್ಠ ಸಿಂಹ ನಟನೆಯ ‘ಲವ್ ಲಿ’ ಸಿನಿಮಾ ಸೆಟ್ಟೇರಿದ ದಿನದಿಂದ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಲೇ ಇದೆ. ಸಿಲಿಕಾನ್ ಸಿಟಿಯಲ್ಲಿ ಮೊದಲ ಹಾಗೂ ಎರಡನೇ ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮಲ್ಪೆಯ ಪಡುಕರೆಯಲ್ಲಿ ಮೂರನೇ ಹಂತದ ಚಿತ್ರೀಕರಣದಲ್ಲಿ ತೊಡಗಿದೆ.
‘ಲವ್ ಲಿ’ ಚಿತ್ರೀಕರಣಕ್ಕೆಂದೇ ಪಡುಕರೆಯ ಕಡಲ ತೀರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಕೇವಲ 25 ದಿನದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದ್ದು, ಕಳೆದ ಹತ್ತು ದಿನಗಳಿಂದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಸಿಷ್ಠ ಸಿಂಹ, ಸಾಧುಕೋಕಿಲ, ನಾಯಕಿ ಸ್ಟೆಫಿ ಪಟೇಲ್ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ನಟ ವಸಿಷ್ಠ ಸಿಂಹ ಮಾತನಾಡಿ ಇದೊಂದು ಕಮರ್ಶಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ರೌಡಿಸಂ ಕಥಾಹಂದರ ಕೂಡ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಅದನ್ನು ಸಿನಿಮೀಯ ರೀತಿಯಲ್ಲಿ ಹೇಳ ಹೊರಟಿದ್ದೇವೆ. ಎಂಟರಿಂದ ಹತ್ತು ಭಾವನೆಗಳನ್ನು ಒಮ್ಮೆಲೆ ಕ್ಯಾರಿ ಮಾಡುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ಪಾತ್ರಕ್ಕೆ ಜೀವ ತುಂಬುವ ಕೆಲಸ ನಡೆಯುತ್ತಿದೆ. ಈ ಸಿನಿಮಾ ಸಿನಿ ಪ್ರಿಯರ ಮನಸ್ಸು ಗೆಲ್ಲುವುದರಲ್ಲಿ ಮರು ಮಾತಿಲ್ಲ ಎಂದು ತಿಳಿಸಿದ್ರು.
ನಿರ್ದೇಶಕ ಚೇತನ್ ಕೇಶವ್ ಮಾತನಾಡಿ 7 ದಿನಗಳ ಚಿತ್ರೀಕರಣ ನಡೆಸಿದ್ರೆ ಶೇಕಡಾ 80ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ. ಲಂಡನ್ ನಲ್ಲೂ ಚಿತ್ರೀಕರಣ ಮಾಡಬೇಕಿದೆ. ಜನವರಿ ಮೊದಲ ವಾರದಲ್ಲಿ ಚಿತ್ರತಂಡ ಲಂಡನ್ ಗೆ ತೆರಳಲಿದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.
‘ಲವ್ ಲಿ’ ಚಿತ್ರವನ್ನು ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದು, ವಸಿಷ್ಠ ಸಿಂಹಗೆ ನಾಯಕಿಯಾಗಿ ಜಾರ್ಕಂಡ್ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಚಿತ್ರದಲ್ಲಿ ಪ್ರಮುಖ ರೋಲ್ ನಲ್ಲಿ ಮಿಂಚಲಿದ್ದಾರೆ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭ್ ರಾಜ್, ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಲವ್ ಲಿ ಚಿತ್ರವನ್ನು ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
Vasishtha Simha: The set of ‘Love Li’ is ready at the cost of crores…